ADVERTISEMENT

ಸ್ವಂತ ಮಗನಿಂದಲೇ ತಾಯಿಗೆ ಶೌಚಗೃಹದಲ್ಲಿ ದಿಗ್ಬಂಧನ

ಅನ್ನ ನೀರು ನೀಡದೆ ಅಮಾನವೀಯವಾಗಿ ನಡೆಸಿಕೊಂಡ ಕುಕೃತ್ಯ

ಪಿಟಿಐ
Published 8 ಜೂನ್ 2021, 16:16 IST
Last Updated 8 ಜೂನ್ 2021, 16:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಯಮತ್ತೂರು, ತಮಿಳುನಾಡು: 95 ವರ್ಷದ ವೃದ್ಧೆಗೆ ಸ್ವಂತ ಮಗನೇ ಹದಿನೈದು ದಿನಗಳಿಂದ ಅನ್ನ ನೀರು ನೀಡದೆ ಆಕೆಯನ್ನು ಶೌಚಗೃಹದಲ್ಲಿ ಬಂಧಿಸಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಆಘಾತಕಾರಿ ಘಟನೆ ಹತ್ತಿರದ ಸೇಲಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ವೃದ್ಧೆಯ ನರಳಾಟ ಗಮನಿಸಿದ ನೆರೆಯೊರೆಯವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು, ವೃದ್ಧೆಯನ್ನು ಅಧಿಕಾರಿಗಳು ಭಾನುವಾರ ರಕ್ಷಿಸಿದ್ದಾರೆ. ನಾಲ್ಕು ಮಕ್ಕಳ ತಾಯಿಯಾಗಿರುವ ರಾಧಾ ಎಂಬ ನತದೃಷ್ಟ ವೃದ್ಧೆಯನ್ನು ಸರ್ಕಾರೇತರ ಸಂಸ್ಥೆಯ ವೃದ್ಧಾಶ್ರಮಕ್ಕೆ ಕರೆದೊಯ್ದಿದ್ದು, ಅಲ್ಲಿ ಆಕೆಗೆ ಚಿಕಿತ್ಸೆ ನೀಡಿ, ಆಹಾರ ಕೊಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಬಲವಂತವಾಗಿ ಬೀಗ ಹಾಕಲಾಗಿದೆ ಎಂಬ ದೂರನ್ನು ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸರ ಇಲಾಖೆ ಅಧಿಕಾರಿಗಳು ಒಮಾಲೂರ್‌ನ ಡಾಲ್ಮಿಯಾ ಬೋರ್ಡ್ ಪ್ರದೇಶದ ಫ್ಲ್ಯಾಟ್‌ಗೆ ತೆರಳಿ ಪರಿಶೀಲಿಸಿದಾಗ ವೃದ್ಧೆ ಶೌಚಾಲಯದಲ್ಲಿ ಅಸ್ವಸ್ಥಳಾಗಿ ಬಿದ್ದಿರುವುದು ಕಂಡುಬಂದಿದೆ. ತನ್ನ ಮಗ ಕಾಳಜಿ ಮಾಡಲು ನಿರಾಕರಿಸಿದ್ದರಿಂದ ಆಕೆ ಸಣ್ಣ ಶೌಚಾಲಯದಲ್ಲಿ ಬಂಧಿಯಾಗಿ, ಅಲ್ಲಿ ಹರಿಯುವ ನೀರನ್ನೇ ಕುಡಿದುಕೊಂಡು ಜೀವ ಉಳಿಸಿಕೊಂಡಿದ್ದಾಗಿ ವರದಿಯಾಗಿದೆ.

ADVERTISEMENT

ಈ ವೃದ್ಧೆ ತನ್ನ ದಿವಂಗತ ಪತಿಯ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರು. ಪಿಂಚಣಿ ಹಣವನ್ನೂ ಈಕೆಯ ಕಿರಿಯ ಮಗ ನೀಡದೆ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೀತಿ ಅಮಾನವೀಯವಾಗಿ ನಡೆಸಿಕೊಂಡರೂ ವೃದ್ಧೆ ತನ್ನ ಮಗನ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.