ADVERTISEMENT

ಲಸಿಕೆ ಅಭಿಯಾನ| ಉದ್ಯೋಗ, ವೃತ್ತಿ ಆಧರಿಸಿ ವಿಶೇಷ ವರ್ಗ ಸೃಷ್ಟಿಸಲಾಗದು ಎಂದ ಕೇಂದ್ರ

ಪಿಟಿಐ
Published 15 ಮಾರ್ಚ್ 2021, 20:57 IST
Last Updated 15 ಮಾರ್ಚ್ 2021, 20:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉದ್ಯೋಗ ಅಥವಾ ವೃತ್ತಿಯನ್ನು ಆಧರಿಸಿ ಕೋವಿಡ್‌ ಲಸಿಕೆ ನೀಡಲು ಆದ್ಯತಾ ವಲಯದಲ್ಲಿ ಉಪವರ್ಗ ಸೃಷ್ಟಿಸಲಾಗದು. ಸದ್ಯ, ಆರೋಗ್ಯ ಸ್ಥಿತಿ, ಕೆಲಸದ ಸ್ವರೂಪ ಮತ್ತು ವಯಸ್ಸು ಆಧರಿಸಿ ಲಸಿಕೆ ನೀಡಲು ನೀತಿ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಕೋವಿಡ್‌ ಲಸಿಕೆಯನ್ನು ನೀಡುವ ಕುರಿತಂತೆ ಆಗಸ್ಟ್‌ 7, 2020ರಲ್ಲಿ ಪರಿಣಿತರ ರಾಷ್ಟ್ರೀಯ ತಂಡವನ್ನು ರಚಿಸಲಾಗಿದೆ. ಈ ತಂಡವು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೀರಿದವರು, 45 ರಿಂದ 59 ವರ್ಷದವರಿಗೆ ಆದ್ಯತೆ ಮೇಲೆ ನೀಡಬೇಕು ಎಂದು ಸಲಹೆ ಮಾಡಿದೆ ಎಂದು ತಿಳಿಸಿದೆ.

ದೇಶದಲ್ಲಿ ಜನವರಿ 16ರಿಂದ ಮಾರ್ಚ್ 6ರ ಅವಧಿಯಲ್ಲಿ ಒಟ್ಟು 2.1 ಕೋಟಿ ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಇದೇ ಅವಧಿಯಲ್ಲಿ ಅಮೆರಿಕ, ಬ್ರಿಟನ್, ಸ್ಪೇನ್, ಇಸ್ರೇಲ್‌ನಲ್ಲಿ ಕ್ರಮವಾಗಿ 3.2 ಕೋಟಿ, 76 ಲಕ್ಷ, 25.6 ಲಕ್ಷ, 55.4 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸರ್ಕಾರ ಅಂಕಿ ಅಂಶವನ್ನು ನೀಡಿತು.

ADVERTISEMENT

ಲಸಿಕೆಯನ್ನು ನೀಡುವಾಗ ಆದ್ಯತಾ ವಲಯದಿಂದ ವಕೀಲರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಅರವಿಂದ ಸಿಂಗ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕೇಂದ್ರವು, ವಕೀಲರು ಮತ್ತು 45 ವರ್ಷದಿಂದ ಕೆಳಗಿನವರು ಒಳಗೊಂಡು ವಿಶೇಷ ವರ್ಗ ರೂಪಿಸಲಾಗದು ಎಂದು ಸ್ಪಷ್ಟಪಡಿಸಿತು.

ಒಟ್ಟಾರೆ ದೇಶದ ಹಿತದೃಷ್ಟಿಯಿಂದ ಆದ್ಯತೆ ವಲಯದಲ್ಲಿ ಉಪವರ್ಗವನ್ನು ಅವರ ವೃತ್ತಿ, ಉದ್ಯೋಗ ಆಧರಿಸಿ ಈ ಹಂತದಲ್ಲಿ ಸೃಷ್ಟಿಸಲು ಆಗದು ಎಂದು ತಿಳಿಸಿದೆ. ಕೋರ್ಟ್‌ ಈ ಕುರಿತ ವಿಚಾರಣೆಯನ್ನು ಮಾರ್ಚ್‌ 18ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.