ADVERTISEMENT

ಜಿಎಸ್‌ಟಿ ಪ್ರಕರಣ | ಬಂಧನ ಅನಿವಾರ್ಯವಲ್ಲ ಎಂದ ಸುಪ್ರೀಂ ಕೋರ್ಟ್

ಪಿಟಿಐ
Published 15 ಮೇ 2024, 15:55 IST
Last Updated 15 ಮೇ 2024, 15:55 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ಬಂಧನದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಆಪರಾಧಿಕತೆಯನ್ನು ಸಾಬೀತು ಮಾಡಲು ವಿಶ್ವಾಸಾರ್ಹವಾದ ಸಾಕ್ಷ್ಯಗಳು ಇದ್ದಾಗ ಮಾತ್ರ ಬಂಧನಕ್ಕೆ ಮುಂದಾಗಬಹುದು ಎಂದು ಹೇಳಿದೆ.

ಕಸ್ಟಮ್ಸ್ ಕಾಯ್ದೆ, ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅಂಶಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂ.ಎಂ. ಸುಂದರೇಶ್ ಮತ್ತು ಬೇಲಾ ಎಂ. ತ್ರಿವೇದಿ ಅವರು ಇದ್ದ ತ್ರಿಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ. ಬಂಧಿಸುವ ಅಧಿಕಾರ ಹಾಗೂ ಬಂಧನದ ಅವಶ್ಯಕತೆ ಬೇರೆ ಬೇರೆ ಎಂದು ಪೀಠವು ಹೇಳಿದೆ.

ADVERTISEMENT

‘ತನಿಖೆ ಪೂರ್ಣಗೊಳ್ಳಬೇಕು ಎಂದಾದರೆ ಬಂಧನ ಆಗಲೇಬೇಕು ಎಂದು ಶಾಸನ ಹೇಳುವುದಿಲ್ಲ. ಶಾಸನದ ಉದ್ದೇಶ ಬಂಧನ ಅಲ್ಲ. ಜಿಎಸ್‌ಟಿಗೆ ಸಂಬಂಧಿಸಿದ ಪ್ರತಿ ಪ್ರಕರಣದಲ್ಲಿಯೂ ಬಂಧಿಸುವ ಅಗತ್ಯ ಇಲ್ಲ’ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಉದ್ದೇಶಿಸಿ ಹೇಳಿತು.

ಸ್ವಾತಂತ್ರ್ಯಕ್ಕೆ ಕಾನೂನು ಹೆಚ್ಚಿನ ಆದ್ಯತೆ ನೀಡಿರುವಾಗ ಅದನ್ನು ದುರ್ಬಲಗೊಳಿಸುವ ಅಗತ್ಯ ಇಲ್ಲ ಎಂದು ಕೂಡ ಪೀಠವು ತಿಳಿಸಿತು. ‘ಅನುಮಾನದ ಆಧಾರದಲ್ಲಿ ಬಂಧನ ಮಾಡುವುದಿಲ್ಲ. ಆದರೆ, ಗಂಭೀರ ಸ್ವರೂಪದ ಅಪರಾಧ ನಡೆದಿದೆ ಎಂದು ಭಾವಿಸಲು ಕಾರಣಗಳು ಇದ್ದಾಗ ಬಂಧಿಸಲಾಗುತ್ತದೆ’ ಎಂದು ರಾಜು ಅವರು ಹೇಳಿದರು.

ಕಸ್ಟಮ್ಸ್ ಕಾಯ್ದೆ ಹಾಗೂ ಜಿಎಸ್‌ಟಿ ಕಾಯ್ದೆಯ ಹಲವು ಅಂಶಗಳನ್ನು ಪ್ರಶ್ನಿಸಿರುವ ಅರ್ಜಿದಾರರು, ಎರಡೂ ಕಾಯ್ದೆಗಳಲ್ಲಿ ಇರುವ ಬಂಧನ ಅವಕಾಶವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.