ADVERTISEMENT

ಇ.ಡಿ ದಾಳಿಗೆ ಹೆದರುವುದಿಲ್ಲ: ಬಿಜೆಪಿ, ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 9:33 IST
Last Updated 4 ಸೆಪ್ಟೆಂಬರ್ 2022, 9:33 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ   

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ದ್ವೇಷ ಹೆಚ್ಚಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಅವರು ಬೆಲೆ ಏರಿಕೆ ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ್ದಾರೆ.

'ದೇಶದಲ್ಲಿ ಭಯ ಮತ್ತು ದ್ವೇಷದಿಂದ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಲಾಭವಾಗುತ್ತಿದೆ. ಅವರಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

ADVERTISEMENT

'ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಧ್ವನಿ ಏರಿಸಲು ಮುಂದಾದರೆ, ಮೋದಿ ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ' ಎಂದು ಟೀಕಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗಳ ಬಗ್ಗೆಯೂ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ. ಮುಂದುವರಿದು, 'ನನ್ನನ್ನು 55 ಗಂಟೆ ಕಾಲ ಇ.ಡಿ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು. ಆದರೆ, ನಾನು ನಿಮ್ಮ ಇ.ಡಿ.ಗೆ ಹೆದರುವುದಿಲ್ಲ ಎಂದು ಪ್ರಧಾನಿ ಅವರಿಗೆ ಹೇಳಲು ಬಯಸುತ್ತೇನೆ' ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.