ADVERTISEMENT

ರಾಜ್ಯ ಸರ್ಕಾರಗಳೊಂದಿಗೆ ಹೋರಾಡುವ ಸಮಯವಲ್ಲ: ಕೇಜ್ರಿವಾಲ್

ಪಿಟಿಐ
Published 31 ಮೇ 2021, 9:23 IST
Last Updated 31 ಮೇ 2021, 9:23 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ಇದು ರಾಜ್ಯ ಸರ್ಕಾರಗಳೊಂದಿಗೆ ಹೋರಾಡುವ ಸಮಯವಲ್ಲ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರ ವಾಪಸ್ ಕರೆಯಿಸಿರುವ ಬೆನ್ನಲ್ಲೇ ಸೃಷ್ಟಿಯಾಗಿರುವ ವಿವಾದದ ಕುರಿತಾಗಿ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಇದು ರಾಜ್ಯ ಸರ್ಕಾರಗಳೊಂದಿಗೆ ಹೋರಾಡುವ ಸಮಯವಲ್ಲ, ಎಲ್ಲರೂ ಒಟ್ಟಾಗಿ ಕೊರೊನಾವೈರಸ್ ವಿರುದ್ದ ಹೋರಾಡುವ ಸಮಯ. ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು, ಲಸಿಕೆಗಳನ್ನು ಒದಗಿಸಲು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಟೀಮ್ ಇಂಡಿಯಾದಂತೆ ಕೆಲಸ ಮಾಡುವ ಸಮಯ. ರಾಜಕೀಯಕ್ಕಾಗಿ ಇಡೀ ಜೀವನವೇ ಉಳಿದಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಯಸ್ ಚಂಡಮಾರುತ ಹಾಗೂ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಕೈಗೊಂಡಿರುವ ನಿರ್ಧಾರ ಸರಿಯಲ್ಲ. ಇದರಲ್ಲಿ ದ್ವೇಷದ ರಾಜಕಾರಣ ಅಡಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಪಶ್ಚಿಮ ಬಂಗಾಳದ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಬಂಡೋಪಾಧ್ಯಾಯರಿಗೆ 60 ವರ್ಷ ತುಂಬಿದ ನಂತರ ಮೇ 31ರಂದು ನಿವೃತ್ತಿ ಹೊಂದಬೇಕಿತ್ತು. ಆದರೆ ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಕೇಂದ್ರದಿಂದ ಅನುಮೋದನೆ ಲಭಿಸಿದ ಬಳಿಕ ಅವರ ಸೇವೆಯು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.