ADVERTISEMENT

ನೋಟು ರದ್ದತಿ ಜಿಎಸ್‌ಟಿ, ಲಾಕ್‌ಡೌನ್‌ನಿಂದ ಆರ್ಥಿಕತೆ ನಾಶ -ರಾಹುಲ್‌ ಗಾಂಧಿ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 9 ಆಗಸ್ಟ್ 2020, 13:40 IST
Last Updated 9 ಆಗಸ್ಟ್ 2020, 13:40 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ನೋಟು ರದ್ದತಿ, ಜಿಎಸ್‌ಟಿ ಜಾರಿಯಲ್ಲಿನ ಲೋಪ, ಲಾಕ್‌ಡೌನ್‌ನಂಥ ಕ್ರಮಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನೇ ನಾಶ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಪಕ್ಷದ ಯುವ ಘಟಕವು ಆರಂಭಿಸಿರುವ ‘ಉದ್ಯೊಗ ಕೊಡಿ’ ಆಂದೋಲನದ ಅಂಗವಾಗಿ ಭಾನುವಾರ ವಿಡಿಯೊ ಸಂದೇಶವನ್ನು ಅವರು ಟ್ವೀಟ್‌ ಮಾಡಿದ್ದಾರೆ.

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ, ಅವರು ನುಡಿದಂತೆ ನಡೆಯಲೇ ಇಲ್ಲ. ಬದಲಾಗಿ ಅವರ ತಪ್ಪು ನೀತಿಗಳಿಂದಾಗಿ 14 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ಆರ್ಥಿಕತೆಯೇ ಕುಸಿದಿದೆ. ಹೀಗಾಗಿ ದೇಶದ ಯುವ ಜನತೆಗಾಗಿ ಉದ್ಯೋಗ ಸೃಷ್ಟಿ ಸಾಧ್ಯವಾಗುವುದೇ ಇಲ್ಲ’ ಎಂದಿದ್ದಾರೆ.

‘ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಯುವ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ಆರಂಭಿಸಿರುವುದು ಸಂತಸ ತಂದಿದೆ. ನಿರುದ್ಯೋಗ, ಆರ್ಥಿಕ ಸಂಕಷ್ಟದಂತಹ ವಿಷಯಗಳನ್ನು ಜನರಿಗೆ ತಿಳಿಸಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಊರಿನಲ್ಲಿಯೂ ಆಂದೋಲನವನ್ನು ಹಮ್ಮಿಕೊಳ್ಳುವರು’ ಎಂದೂ ಹೇಳಿದ್ದಾರೆ.

ಬೆಂಬಲ: ಯುವ ಕಾಂಗ್ರೆಸ್‌ ಆರಂಭಿಸಿರುವ ಈ ಆಂದೋಲನಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂದಿ ವಾದ್ರಾ ಸಹ ಬೆಂಬಲ ಸೂಚಿಸಿದ್ದು, ಯುವಕರ ಶಕ್ತಿಯೇ ಭಾರತದ ಶಕ್ತಿ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.