ADVERTISEMENT

ನಶಿಸುತ್ತಿದೆ ಬನಾರಸ್‌ನ ಮೂಲಸೌಂದರ್ಯ: ಖ್ಯಾತ ಲೇಖಕ ಕಾಶೀನಾಥ ಸಿಂಗ್‌ ಬೇಸರ

ಪಿಟಿಐ
Published 25 ಡಿಸೆಂಬರ್ 2025, 15:35 IST
Last Updated 25 ಡಿಸೆಂಬರ್ 2025, 15:35 IST
ಕಾಶಿನಾಥ ಸಿಂಗ್‌
ಕಾಶಿನಾಥ ಸಿಂಗ್‌   

ವಾರಾಣಸಿ: ‘ಭಾರತದ ಶಾಸ್ತ್ರೀಯ ಕಲೆಗಳ ಕಲಿಕೆಗೆ, ದೈವಿಕ ಜ್ಞಾನಾರ್ಜನೆಗೆ, ಪರಂಪ‍ರೆಗೆ ಹೆಸರುವಾಸಿಯಾಗಿದ್ದ ವಾರಾಣಸಿಯು ಈಗ ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಿಹೋಗಿದೆ. ಅದರ ಮೂಲ ಸೌಂದರ್ಯ ನಶಿಸಿಹೋಗುತ್ತಿದೆ’ ಎಂದು ಖ್ಯಾತ ಹಿಂದಿ ಲೇಖಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಶೀನಾಥ ಸಿಂಗ್‌ ಹೇಳಿದ್ದಾರೆ. 

ಬನಾರಸ್‌ನಲ್ಲಿ ಏಳು ದಶಕಗಳ ಜೀವನ ನಡೆಸಿರುವ ಸಿಂಗ್‌, ವಾರಾಣಸಿಯ ಬದಲಾವಣೆಯ ಬಗ್ಗೆ ಸಂದರ್ಶನವೊಂದರಲ್ಲಿ ಬೇಸರದ ಮಾತುಗಳನ್ನಾಡಿದ್ದಾರೆ. 

‘ಕಲೆ ಮತ್ತು ಸಂಸ್ಕೃತಿ ಮಿಳಿತವಾಗಿರುವ, ಶತಮಾನಗಳಷ್ಟು ಹಳೆಯ ಪರಂಪರೆಯ ಅನುಭೂತಿ ಪಡೆಯಲು ಹಿಂದೆಲ್ಲಾ ಜನರು ಬನಾರಸ್‌ಗೆ ಬರುತ್ತಿದ್ದರು. ಇದು ಗಲ್ಲಿಗಳು, ಮೊಹಲ್ಲಾಗಳಿಂದ ಕೂಡಿದ ನಗರವಾಗಿತ್ತು. ವಾರಾಣಸಿಯ ಸಂಸ್ಕೃತಿ ಕಾಣಲು ಹವಣಿಸುತ್ತಿದ್ದ ಜನರು, ಈಗ ಕೇವಲ ನಮೋ ಘಾಟ್‌, ಅಸ್ಸೀ ಘಾಟ್‌ಗಳಲ್ಲಿ ನಡೆಯುವ ಆರತಿಯನ್ನು ನೋಡಲು ಬರುತ್ತಿದ್ದಾರೆ’ ಎಂದಿದ್ದಾರೆ. 

ADVERTISEMENT

ಅಲ್ಲದೇ, ‘1953ರಲ್ಲಿ ನಾವು ಈ ಶಹರಕ್ಕೆ ಬಂದಾಗ ಬೆರಳೆಣಿಕೆಯ ಕಾರುಗಳಿದ್ದವು. ಉಳಿದಂತೆ ಜಟಕಾ ಗಾಡಿಗಳು ಕಾಣಸಿಗುತ್ತಿದ್ದವು. ಈಗ ನಗರದಲ್ಲಿ ಮಾಲ್‌ಗಳು, ಕಾಲೊನಿಗಳು ಸೃಷ್ಟಿಯಾಗಿವೆ. ಈಗಿನ ಬನಾರಸ್‌ಗೂ ದೆಹಲಿಗೂ ಅಥವಾ ಇನ್ನಿತರ ಯಾವುದೇ ದೊಡ್ಡ ನಗರಗಳಿಗೂ ವ್ಯತ್ಯಾಸವೇ ಇಲ್ಲದಾಗಿದೆ’ ಎಂದೂ ಸಿಂಗ್‌ ಹೇಳಿದ್ದಾರೆ. 

ಇದೇ ವೇಳೆ, ಇತ್ತೀಚೆಗಷ್ಟೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮುಂದೂಡಲಾದ ಕುರಿತು ಮಾತನಾಡಿದ ಅವರು, ‘ಸರ್ಕಾರಕ್ಕೆ ಸಾಹಿತ್ಯದಿಂದ ಏನೂ ಆಗಬೇಕಿಲ್ಲ. ಸರ್ಕಾರಕ್ಕೆ ಸಾಹಿತ್ಯ ಅಪ್ರಸ್ತುತವಷ್ಟೇ ಆಗಿಲ್ಲ, ಅನಗತ್ಯ ಎಂದೇ ಪರಿಗಣಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.