ADVERTISEMENT

ಎಚ್ಚರಿಕೆ ಸೂಚನೆ: ಕೇಂದ್ರ ಸರ್ಕಾರದಿಂದ ಆ್ಯಪಲ್‌ ಕಂಪನಿಗೆ ನೋಟಿಸ್‌

ಪಿಟಿಐ
ರಾಯಿಟರ್ಸ್‌
Published 2 ನವೆಂಬರ್ 2023, 13:37 IST
Last Updated 2 ನವೆಂಬರ್ 2023, 13:37 IST
.
.   

ನವದೆಹಲಿ: ಐಫೋನ್‌ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿರುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಆ್ಯಪಲ್‌ ಕಂಪನಿಯು ಕಳುಹಿಸಿದ್ದ ‘ಎಚ್ಚರಿಕೆ ಸೂಚನೆ’ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಗಣಕಯಂತ್ರ ತುರ್ತು ಸ್ಪಂದನಾ ತಂಡವು (ಸಿಇಆರ್‌ಟಿ–ಇನ್‌) ತನಿಖೆ ಆರಂಭಿಸಿದೆ. ಜೊತೆಗೆ, ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕರಣ ಸಂಬಂಧ ಆ್ಯಪಲ್‌ ಕಂಪನಿಗೆ ನೋಟಿಸ್‌ ಜಾರಿ ಮಾಡಿದೆ.

ನೋಟಿಸ್‌ ಜಾರಿ ಮಾಡಿದ ಕುರಿತು ಸಚಿವಾಲಯದ ಕಾರ್ಯದರ್ಶಿ ಎಸ್‌.ಕೃಷ್ಣನ್‌ ಅವರು ಗುರುವಾರ ಮಾಹಿತಿ ನೀಡಿದ್ದಾರೆ. ನೋಟಿಸ್‌ ತಲುಪಿದ ಬಗ್ಗೆ ಆ್ಯಪಲ್‌ ಕಂಪನಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ‘ನೋಟಿಸ್‌ ತಲುಪಿರುವುದನ್ನು ಆ್ಯಪಲ್‌ ಕಂಪನಿಯು ಖಚಿತಪಡಿಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ತನ್ನ ಮೊಬೈಲ್‌ಗಳು ಅತ್ಯಂತ ಸುರಕ್ಷಿತ ಎಂದು ಆ್ಯಪಲ್‌ ಕಂಪನಿಯು ಹೇಳುತ್ತದೆ. ಹಾಗಿದ್ದ ಮೇಲೆ ‘ಎಚ್ಚರಿಕೆ ಸೂಚನೆ’ಗಳನ್ನು ಯಾಕಾಗಿ ಕಳುಹಿಸುತ್ತದೆ. ಈ ಬಗ್ಗೆ ಕಂಪನಿಯು ಸ್ಪಷ್ಟನೆ ನೀಡಬೇಕು’ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಮಂಗಳವಾರ ಬರೆದುಕೊಂಡಿದ್ದರು. ಸಚಿವರ ಈ ಅಭಿಪ್ರಾಯದಲ್ಲಿ ಇದ್ದ ಅಂಶಗಳನ್ನೇ ಇಟ್ಟುಕೊಂಡು ಆ್ಯಪಲ್‌ ಕಂಪನಿಯ ಎಚ್ಚರಿಕೆ ಸೂಚನೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ

ADVERTISEMENT
ಸಿಇಆರ್‌ಟಿ–ಇನ್‌ ತನಿಖೆ ಆರಂಭಿಸಿದೆ. ಆ್ಯಪಲ್‌ ಕಂಪನಿಯು ತನಿಖೆಗೆ ಖಂಡಿತ ಸಹಕರಿಸುತ್ತದೆ.
–ಎಸ್‌. ಕೃಷ್ಣನ್‌ ಕಾರ್ಯದರ್ಶಿ ಮಾಹಿತಿ ತಂತ್ರಜ್ಞಾನ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.