ಇಂಟರ್ನೆಟ್ ಸ್ಥಗಿತ
Credit: iStock Photo
ಗುರುಗ್ರಾಮ: ಹರಿಯಾಣದ ನುಹ್ ಜಿಲ್ಲೆಯಲ್ಲಿ ಇಂದು (ಸೋಮವಾರ) ಬ್ರಿಜ್ ಮಂಡಲ್ ಶೋಭಾ ಯಾತ್ರೆ ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್‌ನೆಟ್, ಎಸ್‌ಎಂಎಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ವಿಶ್ರಾಮ್ ಕುಮಾರ್ ಮೀನಾ ಅವರು ಭಾರತೀಯ ನಾಗರಿಕ ಭದ್ರತಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಆದೇಶ ಹೊರಡಿಸಿದ್ದು, ಪರವಾನಗಿ ಪಡೆದ ಶಸ್ತ್ರಾಸ್ತ್ರಗಳು, ಬಂದೂಕು, ಕತ್ತಿ, ಕೋಲು, ತ್ರಿಶೂಲ, ರಾಡ್, ಚಾಕು, ಸರಪಳಿ ಸೇರಿದಂತೆ ಎಲ್ಲಾ ರೀತಿ ಶಸ್ತ್ರಾಸ್ತ್ರಗಳ ಬಳಕೆ ನಿರ್ಬಂಧ ಹೇರಲಾಗಿದೆ. ಸಿಖ್ ಸಮುದಾಯದ ಸದಸ್ಯರು ಧಾರ್ಮಿಕ ಸಂಕೇತವಾಗಿ ‘ಕಿರ್ಪಾನ್’ಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾತ್ರೆಯ ಸಮಯದಲ್ಲಿ ಡಿಜೆ ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಚೋದನಕಾರಿ ಅಥವಾ ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತಹ ಪ್ರಸಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ವಿಶ್ರಾಮ್ ಕುಮಾರ್ ಹೇಳಿದ್ದಾರೆ.
ಜುಲೈ 24ರವರೆಗೆ ಶೋಭಾ ಯಾತ್ರೆ ಸಾಗುವ ಮಾರ್ಗದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಜತೆಗೆ, ಈ ಪ್ರದೇಶದಲ್ಲಿ ಇಂಟರ್ನೆಟ್, ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಡ್ರೋನ್ ಕಣ್ಗಾವಲು ಸಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವ್ಯಾಟ್ಸ್ ಆ್ಯಪ್, ಫೇಸ್‌ಬುಕ್, ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಪ್ಪು ಮಾಹಿತಿ ಮತ್ತು ವದಂತಿಗಳು ಹರಡುವುದನ್ನು ತಡೆಗಟ್ಟುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಗೃಹ ಇಲಾಖೆಯ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.