ADVERTISEMENT

ವೈದ್ಯರಿಗೆ ಆರೋಗ್ಯ ಭದ್ರತೆ: ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 20:39 IST
Last Updated 5 ಏಪ್ರಿಲ್ 2020, 20:39 IST
ಹೈದರಾಬಾದ್‌ನ ಆಸ್ಪತ್ರೆಯೊಂದರ ತುರ್ತುಚಿಕಿತ್ಸಾ ವಾರ್ಡ್‌ ಹೊರಭಾಗದಲ್ಲಿ ಭಾನುವಾರ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು –ಪಿಟಿಐ ಚಿತ್ರ
ಹೈದರಾಬಾದ್‌ನ ಆಸ್ಪತ್ರೆಯೊಂದರ ತುರ್ತುಚಿಕಿತ್ಸಾ ವಾರ್ಡ್‌ ಹೊರಭಾಗದಲ್ಲಿ ಭಾನುವಾರ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ಶುಶ್ರೂಷಕರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲು ‘ರಾಷ್ಟ್ರೀಯ ಕೋವಿಡ್‌–19 ನಿರ್ವಹಣಾ ನೀತಿ’ ರೂಪಿಸಲು ಯುನೈಟೆಡ್‌ ನರ್ಸ್‌ಸ್‌ ಅಸೋಸಿಯೇಷನ್‌ಆಗ್ರಹಪಡಿಸಿದೆ.

ಕೇರಳ ಮೂಲದ ಈ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿದ್ದು, ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಿದೆ.

ಕೋವಿಡ್‌ ಪೀಡಿತರ ಚಿಕಿತ್ಸೆಯಲ್ಲಿ ತೊಡಗಿರುವ ಶುಶ್ರೂಷಕರಿಗೆ ಎದುರಾಗಿರುವ ಆತಂಕ, ಜೀವ ಬೆದರಿಕೆ ಕಾರಣಗಳಿಂದಾಗಿ ಇದು ಅಗತ್ಯ. ಅಲ್ಲದೆ, ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್‌’ ಪ್ಯಾಕೇಜ್‌ನಡಿ ವೈಯಕ್ತಿಕ ಅಪಘಾತ ಭದ್ರತೆ ಸೌಲಭ್ಯವನ್ನೂ ಕಲ್ಪಿಸಬೇಕು ಎಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ.

ADVERTISEMENT

ಇದುವರೆಗೂ ಏಳು ವೈದ್ಯರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿವಿಧ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ. ಕನಿಷ್ಠ 50 ನರ್ಸ್‌ಗಳು ಕಡ್ಡಾಯ ಗೃಹವಾಸದಲ್ಲಿ ಇದ್ದಾರೆ. ಇವರಲ್ಲಿ ಬಹುತೇಕರಿಗೆ ಸೋಂಕು ದೃಢಪಟ್ಟಿದೆ ಎಂಬುದನ್ನು ಸಂಸ್ಥೆಯು ಅರ್ಜಿಯಲ್ಲಿ ಉಲ್ಲೇಖಿಸಿದೆ.

ಆರೋಗ್ಯ ಸೇವಾ ಸಿಬ್ಬಂದಿಗೆ ರಕ್ಷಣೆ ಒದಗಿಸುವುದು ಹೆಚ್ಚು ಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.