ADVERTISEMENT

ತಮಿಳುನಾಡಲ್ಲಿ ಕಾವೇರಿ–ವೈಗೈ– ಗುಂಡಾರು ಜೋಡಣಾ ಕಾಲುವೆ: 15ಕ್ಕೆ ಸುಪ್ರೀಂ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 9:17 IST
Last Updated 13 ನವೆಂಬರ್ 2021, 9:17 IST
   

ಬೆಂಗಳೂರು: ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆಯ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರು ಬಳಿ ನಿರ್ಮಿಸುತ್ತಿರುವ ಕಾವೇರಿ–ವೈಗೈ – ಗುಂಡಾರು ಜೋಡಣಾ ಕಾಲುವೆಯ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ದಾಖಲಿಸಿರುವ ಮೂಲದಾವೆ (3/2021) ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ (ನ. 15) ಆರಂಭಿಸಲಿದೆ.

ತಮಿಳುನಾಡಿನ ಕರೂರ ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆ ಮೂಲಕ ವರ್ಗಾಯಿಸಲು ತಮಿಳುನಾಡು ಯೋಜನೆ ರೂಪಿಸಿದೆ. 262 ಕಿ.ಮೀ ಉದ್ದದ ಈ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ 2020ರ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

‘ಕಾವೇರಿ ನ್ಯಾಯ ಮಂಡಳಿ ತಮಿಳುನಾಡಿಗೆ ಹಂಚಿಕೆ ಮಾಡಿರುವ 177. 25 ಟಿಎಂಸಿ ಅಡಿ ನೀರನ್ನು ಬಿಳಿ ಗುಂಡ್ಲುವಿನ ಅಂತರರಾಜ್ಯ ಮಾಪನ ಕೇಂದ್ರದಲ್ಲಿ ನಿಗದಿ‍ಪಡಿಸಿದ ಬಳಿಕ ಒಂದು ಸರಾಸರಿ ವರ್ಷದಲ್ಲಿ ಬಾಕಿ ಉಳಿದ ನೀರು ನಮಗೆ ಸೇರಿದ್ದಾಗಿದೆ. ಅದರಲ್ಲಿ ಕರ್ನಾಟಕದ ಪಾಲಿನ 248.75 ಟಿಎಂಸಿ ಅಡಿ ನೀರು ಮತ್ತು ಕಾವೇರಿಯಲ್ಲಿ ಲಭ್ಯವಾಗಬಹುದಾದ 45 ಟಿಎಂಸಿ ಅಡಿ ನೀರು ನಮಗೆ ಸೇರಿದೆ’ ಎಂದು ಕರ್ನಾಟಕ ಸರ್ಕಾರ ವಾದಿಸುತ್ತಿದೆ. ತನ್ನ ಪಾಲಿನ ನ್ಯಾಯಸಮ್ಮತ ನೀರನ್ನು ಪಡೆದುಕೊಳ್ಳಲು ಕಾನೂನು ಹೋರಾಟಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರ, ಈ ನಿಲುವುನ್ನು ಸುಪ್ರೀಂ ಕೋರ್ಟ್‌ನಲ್ಲೂ ಪ್ರತಿಪಾದಿಸಲಿದೆ.

ADVERTISEMENT

ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯಲು ಪೂರೈಸುವ ಸದುದ್ದೇಶದೊಂದಿಗೆ ಕರ್ನಾಟಕ ಆರಂಭಿಸುವ ಪ್ರತಿ ಯೋಜನೆಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಆಕ್ಷೇಪಣೆ ಸಲ್ಲಿಸುತ್ತಿದೆ. ಮೇಕೆದಾಟು ಬಳಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯವನ್ನೂ ತಮಿಳುನಾಡು ವಿರೋಧಿಸುತ್ತಿದೆ.

ಕಾವೇರಿ– ವೈಗೈ – ಗುಂಡಾರು ಜೋಡಣಾ ಕಾಲುವೆಯ ನಿರ್ಮಾಣದ ಮೊದಲ ಹಂತದ ಯೋಜನೆಗೆ ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.