ಅಸ್ಸಾಂನಲ್ಲಿ ಜೈರಾಮ್ ರಮೇಶ್ ಕಾರಿನ ಮೇಲೆ ದಾಳಿ ಆರೋಪ
ಚಿತ್ರ ಕೃಪೆ: X/@Jairam_Ramesh)
ಗುವಾಹಟಿ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾನುವಾರ ಪಕ್ಷದ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರ ಗುಂಪು ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಇಂದು (ಭಾನುವಾರ), ಎರಡನೇ ಬಾರಿಗೆ ಅಸ್ಸಾಂಗೆ ಕಾಲಿಟ್ಟಿದೆ. ಬಿಸ್ವಂತ್ ಜಿಲ್ಲೆಯಿಂದ ಸೋನಿತ್‌ಪುರ ಮೂಲಕ ನಗಾಂವ್‌ಗೆ ಪ್ರಯಾಣ ಬೆಳೆಸುತ್ತಿದೆ.
ಈ ವೇಳೆ ಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸ್ವತಃ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿಡಿಯೊ ಸಮೇತ ವಿವರಣೆ ನೀಡಿದ್ದಾರೆ.
'ಸೊನೀತ್‌ಪುರದ ಜಮುಗುರಿಘಾಟ್‌ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ. ಕಾರಿನ ವಿಂಡ್‌ಶೀಲ್ಡ್‌ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆಯ ಸ್ಟಿಕ್ಕರ್‌ಗಳನ್ನು ಹರಿದು ಹಾಕಲಾಗಿದೆ. ನೀರನ್ನು ಎಸೆದು ನ್ಯಾಯ ಯಾತ್ರೆಯ ವಿರುದ್ಧ ಘೋಷಣೆ ಕೂಗಲಾಗಿದೆ. ಆದರೆ ನಾವು ಸಂಯಮವನ್ನು ಕಾಪಾಡಿಕೊಂಡೆವು' ಎಂದು ಹೇಳಿದ್ದಾರೆ.
'ನಿಸ್ಸಂಶವಾಗಿಯೂ ಈ ಕೃತ್ಯದ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈವಾಡ ಅಡಗಿದೆ. ಆದರೆ ಬಿಜೆಪಿಯ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸದಂತೆ ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆ ಜನವರಿ 25ರವರೆಗೂ ಅಸ್ಸಾಂನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.