ADVERTISEMENT

ಬೈಡನ್‌ ಆಯ್ಕೆಗೆ ಒಬಾಮಾ ಮನವಿ

ಟ್ರಂಪ್‌ ವಿರುದ್ಧ ವಾಗ್ದಾಳಿ: ಮತದಾನದಿಂದ ಹೊರಗುಳಿಯದಂತೆ ಕಪ್ಪುವರ್ಣೀಯರಿಗೆ ಕರೆ

ಪಿಟಿಐ
Published 22 ಅಕ್ಟೋಬರ್ 2020, 14:03 IST
Last Updated 22 ಅಕ್ಟೋಬರ್ 2020, 14:03 IST
ಬರಾಕ್‌ ಒಬಾಮಾ
ಬರಾಕ್‌ ಒಬಾಮಾ   

ವಾಷಿಂಗ್ಟನ್‌: ಅಮೆರಿಕದಲ್ಲಿ ಚುನಾವಣಾ ಪ್ರಚಾರ ಕಾವೇರಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್‌ ಪಿಡುಗು ನಿಯಂತ್ರಿಸುವಲ್ಲಿ ಟ್ರಂಪ್ ವಿಫಲವಾಗಿದ್ದು, ಮುಂದಿನ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಅವರ ಪರ ಮತ ಚಲಾಯಿಸುವಂತೆ ಜನರಲ್ಲಿ ಒಬಾಮಾ ಮನವಿ ಮಾಡಿದ್ದಾರೆ.

ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೈಡನ್‌ ಉಪಾಧ್ಯಕ್ಷರಾಗಿದ್ದರು. ನವೆಂಬರ್‌ 3ರಂದು ಜನರು ಟ್ರಂಪ್‌ ಅವರನ್ನು ಸೋಲಿಸಿ, ಬೈಡನ್‌ ಹಾಗೂ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಭಾರತ ಮೂಲದ ಕಮಲಾ ದೇವಿ ಹ್ಯಾರಿಸ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಒಬಾಮಾ ಜನರಿಗೆ ಕರೆ ನೀಡಿದರು. ಪ್ರಮುಖವಾಗಿ ಕಪ್ಪುವರ್ಣೀಯರು ಅಧಿಕ ಸಂಖ್ಯೆಯಲ್ಲಿ ಬಂದು ಮತಚಲಾಯಸಿಬೇಕು ಎಂದು ಫಿಲಡೆಲ್ಫಿಯಾದಲ್ಲಿ ಒಬಾಮಾ ಕರೆ ನೀಡಿದ್ದಾರೆ.

‘ದೇಶದ ಆರ್ಥಿಕತೆಯ ಕುರಿತು ಹಾಗೂ ಕೋವಿಡ್‌ ಪಿಡುಗನ್ನು ನಿಯಂತ್ರಿಸುವ ಕುರಿತು ಬೈಡನ್‌ ಹಾಗೂ ಕಮಲಾ ಅವರಿಗೆ ಸೂಕ್ತ ಯೋಜನೆ ಇದೆ. ಬೈಡನ್‌–ಹ್ಯಾರಿಸ್‌ ತಂಡವು ಉತ್ತಮವಾದ ಆಡಳಿತ ನೀಡಲಿದ್ದು, ಸಮರ್ಥ ನಾಯಕತ್ವವನ್ನು ಮತ್ತೆ ಸ್ಥಾಪಿಸಲಿದೆ’ ಎಂದು ಮೊದಲ ಬಾರಿ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಒಬಾಮಾ ಹೇಳಿದರು.

ADVERTISEMENT

‘ಇನ್ನೂ ನಾಲ್ಕು ವರ್ಷ ಟ್ರಂಪ್‌ ಆಡಳಿತವನ್ನು ಸಹಿಸಲು ಸಾಧ್ಯವಿಲ್ಲ. ಕೇವಲ ಟ್ವೀಟ್‌ಗಳಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ದೇಶವನ್ನು ಮುನ್ನಡೆಸಲು ದೂರದೃಷ್ಟಿ ಇರಬೇಕು. ನಾಯಕರು ಪ್ರತಿನಿತ್ಯ ಸುಳ್ಳು ಹೇಳುತ್ತಿದ್ದರೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವುದಿಲ್ಲ. ಟ್ರಂಪ್‌ಗೆ ಚೀನಾದಲ್ಲಿ ರಹಸ್ಯ ಬ್ಯಾಂಕ್‌ ಖಾತೆ ಇದೆ. ಇದು ಹೇಗೆ ಸಾಧ್ಯ. ನಾನು ಮತ್ತೆ ಅಧ್ಯಕ್ಷನಾಗಲು ಚುನಾವಣೆಗೆ ನಿಂತಾಗ ನನ್ನ ಬಳಿ ಇಂಥ ಖಾತೆ ಇದ್ದಿದ್ದರೆ? ಟ್ರಂಪ್‌ ನಮ್ಮನ್ನು ರಕ್ಷಿಸಲು ಸಾಧ್ಯವೇ ಇಲ್ಲ. ಅವರನ್ನು ಅವರೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಟೀಕಿಸಿದರು.

‘ಇದು ನಿಮ್ಮ ಜೀವಿತಾವಧಿಯ ಅತ್ಯಂತ ಅಮೂಲ್ಯ ಚುನಾವಣೆ. 2016ರಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಈ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಮತದಾರರು ಬಂದು ಮತ ಚಲಾಯಿಸಬೇಕು. ಬೈಡನ್‌ ಅವರು ಗೆಲ್ಲುವ ಭರವಸೆ ನನಗಿದೆ’ ಎಂದರು.

ಜನರ ಘನತೆಯನ್ನು ಅರ್ಥಮಾಡಿಕೊಳ್ಳುವ ಅಧ್ಯಕ್ಷರ ಅವಶ್ಯಕತೆ ಇದೆ: ಜನರ ಘನತೆಯನ್ನು ಅರ್ಥ ಮಾಡಿಕೊಳ್ಳುವ ಹಾಗೂ ದೇಶವನ್ನು ಸೂಕ್ತವಾಗಿ ಮುನ್ನಡೆಸುವ ಅಧ್ಯಕ್ಷರನ್ನು ಹೊಂದುವ ಅರ್ಹತೆಯು ಅಮೆರಿಕದ ಜನತೆಗಿದೆ ಎಂದು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಬುಧವಾರ ಹೇಳಿದರು.

ಆನ್‌ಲೈನ್ ಮುಖಾಂತರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹ್ಯಾರಿಸ್‌, ‘ಕೋವಿಡ್‌ ಪಿಡುಗಿನ ಕುರಿತು ಟ್ರಂಪ್‌ ಇನ್ನೂ ಗಂಭೀರವಾಗಿಲ್ಲ. ಮುಖಗವಸು ಧರಿಸುವುದರ ಬಗ್ಗೆಯೂ ಪ್ರಶ್ನೆಮಾಡುತ್ತಿದ್ದಾರೆ. ದೇಶದಲ್ಲಿ 80 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಪಿಡುಗನ್ನು ನಿಯಂತ್ರಿಸುವಲ್ಲಿ ಟ್ರಂಪ್‌ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಕಾರಣದಿಂದ ದೇಶದ ಆರ್ಥಿಕ ಸ್ಥಿತಿಯೂ ಕುಸಿದಿದೆ’ ಎಂದು ಆರೋಪಿಸಿದರು.

ಟ್ರಂಪ್‌ ಗೆಲುವಿಗೆ ಫ್ಲಾರಿಡಾ, ಪೆನ್ಸಿಲ್ವೇನಿಯಾ ನಿರ್ಣಾಯಕ

ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಲು ಡೊನಾಲ್ಡ್‌ ಟ್ರಂಪ್‌ಗೆ ಹಲವು ದಾರಿಗಳಿದ್ದರೂ, ಫ್ಲಾರಿಡಾ ಹಾಗೂ ಪೆನ್ಸಿಲ್ವೇನಿಯಾ ‘ಬ್ಯಾಟಲ್‌ಗ್ರೌಂಡ್‌ ಸ್ಟೇಟ್‌’ಗಳನ್ನು(ಅಧಿಕಾರ ಹಿಡಿಯುವ ಪಕ್ಷವನ್ನು ನಿರ್ಧರಿಸುವ ರಾಜ್ಯ)ತೆಕ್ಕೆಗೆ ಹಾಕಿಕೊಳ್ಳುವುದು ಪ್ರಮುಖವಾಗಿರಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಮತ್ತೆ ಅಧ್ಯಕ್ಷನಾಗಿ ಆಯ್ಕೆಯಾಗಲು ಟ್ರಂಪ್‌ ಅವರಿಗೆ ಇನ್ನೂ 270 ಎಲೆಕ್ಟೋರಲ್‌ ಕಾಲೇಜ್‌(ಚುನಾಯಕರ ಕೂಟ) ಅವಶ್ಯಕತೆ ಇದ್ದು, ಇದೆಲ್ಲವನ್ನೂ ಪಡೆದುಕೊಳ್ಳುವುದು ಸುಲಭವಾಗಿಲ್ಲ ಎನ್ನಲಾಗುತ್ತಿದೆ. ಇದು ಸಾಧ್ಯವಾಗಲು ‘ಬ್ಯಾಟಲ್‌ಗ್ರೌಂಡ್‌ ಸ್ಟೇಟ್‌’ಗಳಲ್ಲಿ ಇರುವ ಮತದಾರರು ಅಗಾಧ ಪ್ರಮಾಣದಲ್ಲಿ ಟ್ರಂಪ್‌ ಪರ ಮತ ಚಲಾಯಿಸಬೇಕಾಗಿದೆ. 2016ರ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಸ್ಕಾನ್ಸಿನ್‌, ಮಿಷಿಗನ್‌, ಮಿನೆಸೋಟ ಹಾಗೂ ನಿವಾಡ ರಾಜ್ಯಗಳಲ್ಲಿ ಹೆಚ್ಚಿನ ಪ್ರಚಾರಕ್ಕೆ ಟ್ರಂಪ್‌ ಒತ್ತು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.