ADVERTISEMENT

ಸುಪ್ರಿಯಾ ಸುಳೆ ರಾಜಕೀಯ ಬಿಟ್ಟು, ಅಡುಗೆ ಮಾಡಿಕೊಂಡಿರಲಿ: ಬಿಜೆಪಿ ನಾಯಕನ ವಿವಾದ

​ಪ್ರಜಾವಾಣಿ ವಾರ್ತೆ
Published 26 ಮೇ 2022, 17:17 IST
Last Updated 26 ಮೇ 2022, 17:17 IST
ಚಂದ್ರಕಾಂತ್‌ ಪಾಟೀಲ್ ಹಾಗೂ ಸುಪ್ರಿಯಾ ಸುಳೆ
ಚಂದ್ರಕಾಂತ್‌ ಪಾಟೀಲ್ ಹಾಗೂ ಸುಪ್ರಿಯಾ ಸುಳೆ   

ಮುಂಬೈ: ‘ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ರಾಜಕಾರಣದಲ್ಲಿರುವುದಕ್ಕಿಂತ ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಲಿ’ ಎಂದಿರುವ ಮಹಾರಾಷ್ಟ್ರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಯು ವಿವಾದ ಹುಟ್ಟುಹಾಕಿದ್ದು, ವಿವಿಧೆಡೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಪಾಟೀಲ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರಿಯಾ ಅವರ ಪತಿ ಸದಾನಂದ ಸುಳೆ, ‘ನನ್ನ ಹೆಂಡತಿ ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿ. ಭಾರತದ ಇತರ ಅನೇಕರಂತೆ ಕಠಿಣ ಶ್ರಮಜೀವಿ ಮತ್ತು ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬರಾದ ನನ್ನ ಹೆಂಡತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಪಾಟೀಲ್ ಹೇಳಿಕೆಯು ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ. ಅವರು (ಬಿಜೆಪಿ) ಯಾವಾಗಲೂ ಸ್ತ್ರೀದ್ವೇಷಿಗಳು. ಸಾಧ್ಯವಾದ ಕಡೆಗಳಲ್ಲೆಲ್ಲಾ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ. ಇದನ್ನು ನಾನು ಸದಾ ಗಮನಿಸುತ್ತಾ ಬಂದಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಏನಿದು ವಿವಾದ?: ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಎನ್‌ಸಿಪಿಯ ಸಭೆಯಲ್ಲಿ ಸುಪ್ರಿಯಾ ಅವರು, ‘ಮಧ್ಯಪ್ರದೇಶದ ಮುಖ್ಯಮಂತ್ರಿ ದೆಹಲಿಗೆ ಬಂದು ‘ಯಾರನ್ನೋ’ ಭೇಟಿಯಾದರು. ಮುಂದಿನ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಅವರು ಒಬಿಸಿಗೆ ಮೀಸಲಾತಿ ನೀಡಲು ಮುಂದಾದರು’ ಎಂದರು.

ADVERTISEMENT

ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಬುಧವಾರ ಮುಂಬೈನಲ್ಲಿ ಬಿಜೆಪಿ ರಾಜ್ಯ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಪಾಟೀಲ್, ‘ನೀವು (ಸುಪ್ರಿಯಾ) ರಾಜಕಾರಣದಲ್ಲಿರುವುದೇಕೆ? ಮನೆಗೆ ಹೋಗಿ ಅಡುಗೆ ಮಾಡಿ. ದೆಹಲಿಗಾದರೂ ಹೋಗಿ ಅಥವಾ ಸ್ಮಶಾನಕ್ಕಾದರೂ ಹೋಗಿ. ಆದರೆ, ನಮಗೆ ಒಬಿಸಿ ಮೀಸಲಾತಿ ದೊರೆಯುವಂತೆ ಮಾಡಿ. ಸಂಸದೆಯಾಗಿರುವ ನಿಮಗೆ ಮುಖ್ಯಮಂತ್ರಿ ಅವರ ಅಪಾಯಿಂಟ್‌ ಮೆಂಟ್ ಪಡೆಯುವುದು ಹೇಗೆಂದು ತಿಳಿದಿಲ್ಲದಿದ್ದರೆ ಹೇಗೆ?’ ಎಂದಿದ್ದರು.

ಟೀಕೆಗಳ ಸುರಿಮಳೆ: ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶರದ್ ‍‍‍ಪವಾರ್ ಅವರ ಸೋದರಳಿಯ, ಉಪಮುಖ್ಯಮಂತ್ರಿ ಅಜಿತ್ ಪವಾರ್, ‘ಅವರಿಗೆ ಸುಪ್ರಿಯಾ ಬಗ್ಗೆ ಈ ರೀತಿ ಮಾತನಾಡುವ ಹಕ್ಕಿಲ್ಲ. ಸಂವಿಧಾನ ಆಕೆಗೆ ಹಕ್ಕು ನೀಡಿದೆ. ಪಾಟೀಲರನ್ನು ಕೊಲ್ಹಾಪುರಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ನಾನು ಹೇಳಲಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ನಿರ್ಧರಿಸುತ್ತಾರೆ’ ಎಂದಿದ್ದಾರೆ.

ಹೇಳಿಕೆ ಸಮರ್ಥಿಸಿಕೊಂಡ ಪಾಟೀಲ್
‘ನನ್ನ ಮಾತು ಮಹಾರಾಷ್ಟ್ರದ ಗ್ರಾಮೀಣ ಶೈಲಿಯಲ್ಲಿದೆ. ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳು ಕೆಲಸ ಮಾಡದಿದ್ದರೆ, ಸ್ಮಶಾನಕ್ಕೆ ಹೋಗುವಂತೆ ಹೇಳುತ್ತಾರೆ’ ಎಂದು ಚಂದ್ರಕಾಂತ್ ಪಾಟೀಲ್ ಗುರುವಾರ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

‘ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರನ್ನಾಗಲೀ, ಇತರ ಮಹಿಳೆಯರನ್ನಾಗಲೀ ಅಗೌರವಿಸುವ ಉದ್ದೇಶವನ್ನು ಹೊಂದಿಲ್ಲ. ನಾವು ಭೇಟಿಯಾದಾಗಲೆಲ್ಲಾ ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತೇವೆ. ಅಡುಗೆ ವಿಷಯ ಬಿಟ್ಟರೆ ಇತರ ಟೀಕೆಗಳಲ್ಲಿ ಮಹಿಳೆಯರನ್ನು ಅಗೌರವಿಸುವಂಥದ್ದು ಏನೂ ಇಲ್ಲ. ಇಂಥ ಪದಗಳನ್ನು ಅನೇಕರು ಬಳಸುತ್ತಾರೆ. ಟೀಕೆ ಮಾಡಲು ನನಗೆ ಹಕ್ಕಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.