ADVERTISEMENT

ನಟಿ ಪೂನಂ ಪಾಂಡೆ ಪೊಲೀಸ್‌ ವಶಕ್ಕೆ

ಅನುಮತಿ ಇಲ್ಲದೇ ಚಪೋಲಿ ಅಣೆಕಟ್ಟು ಪ್ರದೇಶಕ್ಕೆ ಪ್ರವೇಶಿಸಿ ಅಶ್ಲೀಲ ವಿಡಿಯೊ ಚಿತ್ರೀಕರಣ

ಪಿಟಿಐ
Published 5 ನವೆಂಬರ್ 2020, 11:34 IST
Last Updated 5 ನವೆಂಬರ್ 2020, 11:34 IST
ಪೂನಂ ಪಾಂಡೆ
ಪೂನಂ ಪಾಂಡೆ   

ನವದೆಹಲಿ: ಅನುಮತಿ ಇಲ್ಲದೇ ಗೋವಾದ ಚಪೋಲಿ ಅಣೆಕಟ್ಟು ಪ್ರದೇಶಕ್ಕೆ ಪ್ರವೇಶಿಸಿ, ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ಆರೋಪದಡಿ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಚಿತ್ರೀಕರಣಕ್ಕೆ ಅವಕಾಶ ನೀಡಿ, ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದಡಿ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ. ಈ ಕುರಿತು ದಕ್ಷಿಣ ಗೋವಾದ ಕನಕೋನ ಪಟ್ಟಣದ ಜನರು ನೀಡಿದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಉತ್ತರ ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ಪೂನಂ ಪಾಂಡೆ ಅವರನ್ನು ಕಲಾನ್‌ಗುಟೆ ಪೊಲೀಸ್‌ ತಂಡವು ವಶಕ್ಕೆ ಪಡೆದಿದ್ದು ನಂತರದಲ್ಲಿ ಕನಕೋನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ‘ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ತುಕಾರಾಮ್‌ ಚವಾಣ್‌ ಹಾಗೂ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಗೃಹ ಇಲಾಖೆಯು ಇಬ್ಬರ ವಿರುದ್ಧ ತನಿಖೆ ನಡೆಸಲಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ(ದಕ್ಷಿಣ) ಪಂಕಜ್‌ ಕುಮಾರ್‌ ಸಿಂಗ್‌ ತಿಳಿಸಿದರು.

ADVERTISEMENT

ಅಪರಿಚಿತ ವ್ಯಕ್ತಿಗಳು ಅನುಮತಿ ಇಲ್ಲದೇ ಅಣೆಕಟ್ಟು ಪ್ರದೇಶದೊಳಗೆ ಪ್ರವೇಶಿಸಿರುವುದರ ಕುರಿತು ಹಾಗೂ ಅಲ್ಲಿ ಚಿತ್ರೀಕರಣ ನಡೆಸಿ, ಆ ಅಶ್ಲೀಲ ವಿಡಿಯೊಗಳನ್ನು ಹರಿಬಿಟ್ಟಿರುವುದರ ಕುರಿತು ಕಳೆದ ಮಂಗಳವಾರ ಜಲಸಂಪನ್ಮೂಲ ಇಲಾಖೆಯು ಪೊಲೀಸರಿಗೆ ದೂರು ನೀಡಿತ್ತು. ಬುಧವಾರ ಪಾಂಡೆ ವಿರುದ್ಧ ಕನಕೋನ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.