ADVERTISEMENT

ಹೆಂಡತಿಯ ಮೃತದೇಹ ಹೆಗಲ ಮೇಲೆ ಹೊತ್ತೊಯ್ದ ಪತಿ

ಆಸ್ಪತ್ರೆಯಿಂದ ಮರಳುತ್ತಿದ್ದಾಗ ಆಟೊದಲ್ಲಿ ಸಾವು: ಕೆಳಗಿಳಿಸಿದ ಚಾಲಕ

ಪಿಟಿಐ
Published 9 ಫೆಬ್ರುವರಿ 2023, 14:15 IST
Last Updated 9 ಫೆಬ್ರುವರಿ 2023, 14:15 IST
.
.   

ನಬರಂಗಪುರ (ಒಡಿಶಾ): ಆಟೊದಲ್ಲಿ ಮೃತಪಟ್ಟ ಹೆಂಡತಿಯ ಶವವನ್ನು ಸಾಗಿಸಲು ಚಾಲಕ ನಿರಾಕರಿಸಿದ ಕಾರಣ ಒಡಿಶಾದ ಕೊರಾಪುಟ್‌ ಜಿಲ್ಲೆಯ ಸೊರಡಾ ಗ್ರಾಮದ ವ್ಯಕ್ತಿಯೊಬ್ಬರು ಹಲವು ಕಿಲೋ ಮೀಟರ್‌ಗಳವರೆಗೆ ಮೃತದೇಹವನ್ನು ಹೆಗಲ ಮೇಲೆಯೇ ಹೊತ್ತೊಯ್ದ ಪ್ರಕರಣ ನಡೆದಿದೆ.

ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಯಿಂದ ಮರಳುತ್ತಿದ್ದಾಗ ಸಮುಲು ಪಾಂಗಿ ಅವರ ಹೆಂಡತಿ ‘ಇದೆಗುರು’ (30) ಎಂಬುವವರು ಆಟೊದಲ್ಲಿ ಮೃತಪಟ್ಟಿದ್ದಾರೆ. ಚಾಲಕ ಕೆಳಗಿಳಿಸಿದ ಕಾರಣ ಸಮುಲು ಅವರು ಹೆಂಡತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಹಲವು ಕಿ.ಮೀ. ದೂರ ಕ್ರಮಿಸಿದ ಬಳಿಕ ಇವರನ್ನು ಪೊಲೀಸರು ಗಮನಿಸಿದ್ದು, ಬಳಿಕ ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಇದೆಗುರು ಅವರನ್ನು ವಿಶಾಖಪಟ್ಟಣ ಜಿಲ್ಲೆಯ ಸಂಗಿವಲಸದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸಮುಲು ಅವರಿಗೆ ಸಲಹೆ ನೀಡಿದ್ದರು. ಈ ಕಾರಣಕ್ಕೆ ಅವರು 100 ಕಿ.ಮೀ. ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಹೆಂಡತಿಯ ಜೊತೆ ಆಟೊದಲ್ಲಿ ಹೊರಟಿದ್ದರು.

ADVERTISEMENT

‘ಆಂಧ್ರಪ್ರದೇಶದ ವಿಜಯನಗರಂ ಬಳಿ ತಲುಪಿದಾಗ ಹೆಂಡತಿ ಮೃತಪಟ್ಟಿದ್ದಾಳೆ. ಮುಂದೆ ತೆರಳಲು ನಿರಾಕರಿಸಿದ ಆಟೊ ಚಾಲಕ, ಚೆಲ್ಲೂರು ಎಂಬಲ್ಲಿ ತಮ್ಮನ್ನು ಕೆಳಗಿಳಿಸಿದ. ಬೇರೆ ದಾರಿ ಕಾಣದೆ ಮೃತದೇಹವನ್ನು ಹೆಗಲಲ್ಲಿ ಹೊತ್ತೊಯ್ದೆ’ ಎಂದು 35 ವರ್ಷದ ಸಮುಲು ಅವರು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯಂತೆ ಆಂಧ್ರಪ್ರದೇಶದ ಪೊಲೀಸ್‌ ಇನ್‌ಸ್ಪೆಕ್ಟರ್‌ ತಿರುಪತಿ ರಾವ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಕಿರಣ ಕುಮಾರ್‌ ಅವರು ಸಮುಲು ಅವರನ್ನು ತಡೆದು, ಬಳಿಕ ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.