ADVERTISEMENT

Video| ಪದ್ಮಶ್ರೀ ಪುರಸ್ಕೃತೆಯಿಂದ ಐಸಿಯುನಲ್ಲಿ ನೃತ್ಯ ಮಾಡಿಸಿದ ಸಮಾಜಸೇವಕಿ: ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2022, 6:50 IST
Last Updated 3 ಸೆಪ್ಟೆಂಬರ್ 2022, 6:50 IST
ಕಮಲಾ ಪೂಜಾರಿ ಅವರೊಂದಿಗೆ ಮಮತಾ ಬೆಹೆರಾ ನೃತ್ಯ
ಕಮಲಾ ಪೂಜಾರಿ ಅವರೊಂದಿಗೆ ಮಮತಾ ಬೆಹೆರಾ ನೃತ್ಯ    

ಕಟಕ್‌ (ಒಡಿಶಾ): ಅನಾರೋಗ್ಯಕ್ಕೀಡಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಪಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರಿಂದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬಲವಂತವಾಗಿ ನೃತ್ಯ ಮಾಡಿಸಿದ್ದು, ವಿಡಿಯೊ ವೈರಲ್‌ ಆಗಿದೆ. ಸಮಾಜ ಸೇವಕಿಯ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

ಸಾವಯವ ಕೃಷಿಯಲ್ಲಿನ ಸಾಧನೆಗಾಗಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಕಮಲಾ ಪೂಜಾರಿ ಅವರು, ಇತ್ತೀಚೆಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಟಕ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗ ಅಲ್ಲಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಎಂಬುವವರು ಕಮಲಾ ಪೂಜಾರಿ ಅವರಿಂದ ನೃತ್ಯ ಮಾಡಿಸಿದ್ದಾರೆ. ಅಲ್ಲದೇ ಅವರೊಂದಿಗೆ ತಾವೂ ನರ್ತಿಸಿದ್ದಾರೆ.

ಈ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ADVERTISEMENT

ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಮಲಾ ಪೂಜಾರಿ, ‘ಹಾಗೆ ನೃತ್ಯ ಮಾಡಲು ನನಗೆ ಇಷ್ಟವಿರಲಿಲ್ಲ. ಆದರೆ ಅವರು (ಬೆಹೆರಾ) ನನ್ನನ್ನು ಒತ್ತಾಯಿಸಿದರು. ನಾನು ಪದೇ ಪದೇ ನಿರಾಕರಿಸಿದೆ. ಆದರೆ ಅವರು ಕೇಳಲಿಲ್ಲ. ಕ್ಯಾಮರಾ ಮುಂದೆ ಧೆಮ್ಸಾ ನೃತ್ಯ ಮಾಡುವಂತೆ ಕೇಳಿಕೊಂಡರು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ’ ಎಂದು ಪೂಜಾರಿ ಅವರು ಕೊರಾಪುಟ್ ಜಿಲ್ಲೆಯಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಕಮಲಾ ಪೂಜಾರಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದಾಗ ಬಲವಂತವಾಗಿ ನೃತ್ಯ ಮಾಡಿಸಿರುವುದು ದುರದೃಷ್ಟಕರ. ನಾವು ವಿಷಯದ ಬಗ್ಗೆ ಮತ್ತಷ್ಟು ವಿವರಣೆ ಪಡೆಯುತ್ತೇವೆ ಎಂದು ಕೊರಾಪುಟ್‌ನ ಸಬ್ ಕಲೆಕ್ಟರ್ ಬಿಬಿ ಪ್ರಧಾನ್ ಹೇಳಿದ್ದಾರೆ.

ಇನ್ನೊಂದೆಡೆ, ತಮ್ಮು ಸಮುದಾಯದ ಮೇರು ವ್ಯಕ್ತಿಯನ್ನು ಬಲವಂತಪಡಿಸಿದ ಕಾರಣಕ್ಕಾಗಿ ಸಾಮಾಜಿಕ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಆಗ್ರಹಿಸಿದ್ದಾರೆ.

‘ನೃತ್ಯ ಮಾಡಿಸುವುದರ ಹಿಂದೆ ನನಗೆ ಯಾವುದೇ ದುರುದ್ದೇಶವಿರಲಿಲ್ಲ. ಮಂಕಾಗಿದ್ದ ಅವರಲ್ಲಿ ಚೈತನ್ಯ ತುಂಬಲು ಹಾಗೆ ಮಾಡಿದ್ದೆ‘ ಎಂದು ಬೆಹೆರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.