ADVERTISEMENT

ಒಡಿಶಾ | ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ: ತಿಂಗಳೊಳಗೆ 4ನೇ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:56 IST
Last Updated 11 ಆಗಸ್ಟ್ 2025, 5:56 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಭುವನೇಶ್ವರ: 13 ವರ್ಷದ ವಿದ್ಯಾರ್ಥಿನಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾದ ಬರಗಢ ಜಿಲ್ಲೆಯಲ್ಲಿ ನಡೆದಿದೆ. ಈ ರೀತಿ ತಿಂಗಳೊಳಗೆ ನಡೆದ ನಾಲ್ಕನೇ ಘಟನೆ ಇದಾಗಿದೆ.

ಗೈಸಿಲಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿರಿಂಗ್ಮಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಾಲೆ ಬಳಿಯ ಫುಟ್ಬಾಲ್ ಮೈದಾನದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾಳೆ. ಶೇಕಡ 50ರಷ್ಟು ಸುಟ್ಟ ಗಾಯಗಳಾಗಿರುವ ಆಕೆಯ ಸ್ಥಿತಿ ಗಂಭೀರವಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜುಲೈ 12ರಿಂದ ಈಚೆಗೆ ಒಡಿಶಾದಲ್ಲಿ ವಿದ್ಯಾರ್ಥಿನಿಯರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವ ನಾಲ್ಕನೇ ಪ್ರಕರಣ ಇದಾಗಿದೆ.

ಜುಲೈ 12ರಂದು ಇಂಗ್ಲಿಷ್‌ ಪ್ರಾಧ್ಯಾಪಕರೊಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಬಾಲೇಶ್ವರದ ಫಾಕಿರ್‌ ಮೋಹನ್‌ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ನ್ಯಾಯ ಸಿಗದೆ ಕಾಲೇಜು ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ವಿದ್ಯಾರ್ಥಿನಿಯ ಸಾವಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಶೇಕಡ 95ರಷ್ಟು ಸುಟ್ಟ ಗಾಯಗಳಾಗಿದ್ದ ವಿದ್ಯಾರ್ಥಿನಿಯು ಮೂರು ದಿನ ಸಾವು ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದರು.

ಆಗಸ್ಟ್ 2ರಂದು ಒಡಿಶಾದ ಪುರಿಯಲ್ಲಿ ಮೂವರು ದುಷ್ಕರ್ಮಿಗಳು 15 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ್ದರು. ಬಾಲಕಿಗೆ ಶೇ 75ರಷ್ಟು ಸುಟ್ಟಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದರೂ ಬದುಕುಳಿಯಲಿಲ್ಲ.

ಆಗಸ್ಟ್ 6ರಂದು ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಗೆಳೆಯನಿಂದ ಬೆದರಿಕೆಗೆ ಒಳಗಾಗಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಮೃತ ವಿದ್ಯಾರ್ಥಿನಿ ಗೆಳೆಯನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಆತನಿಂದ ಬೆದರಿಗೆ ಒಳಗಾಗಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ’ ಎಂದು ಕೇಂದ್ರಪಾರ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕಟಾರಿಯಾ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.