ADVERTISEMENT

ಒಡಿಶಾ: ಕರಾವಳಿಯುದ್ದಕ್ಕೂ 380 ಕಿ.ಮೀ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಸಿದ್ಧತೆ

ಪಿಟಿಐ
Published 30 ಮೇ 2021, 5:34 IST
Last Updated 30 ಮೇ 2021, 5:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಒಡಿಶಾದಲ್ಲಿ ಕರಾವಳಿ ಭಾಗದ ಕೃಷಿ ಭೂಮಿಯನ್ನು ಉಪ್ಪು ನೀರಿನಿಂದ ರಕ್ಷಿಸಲು ಸುಮಾರು 380 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಇದಕ್ಕೆ ₹ 1,944 ಕೋಟಿ ವೆಚ್ಚವಾಗಬಹುದು ಎಂದು ಜಲಸಂಪನ್ಮೂಲ ಸಚಿವಾಲಯ ಅಂದಾಜು ಮಾಡಿದೆ.

ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅನು ಗರ್ಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಜಲ ಸಂಪನ್ಮೂಲ ವಿಭಾಗದ ಮುಖ್ಯ ಎಂಜಿನಿಯರ್‌ ಜ್ಯೋತಿರ್ಮಯ್‌ ರಾತ್‌ ಅವರು ಈ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ ಎಂದರು.

ಸಮುದ್ರ ತೀರ ಪ್ರದೇಶದ ಉದ್ದಕ್ಕೂ ಕಲ್ಲುಗಳನ್ನು ಜೋಡಿಸುವ ಮೂಲಕ ತಡೆಗೋಡೆ ನಿರ್ಮಿಸಲಾಗುವುದು. ಸಮುದ್ರದಲ್ಲಿ ಬಲಿಷ್ಠ ಅಲೆಗಳು ಬಂದ ಸಂದರ್ಭದಲ್ಲೂ ಈ ಕಲ್ಲುಗಳ ಬೇರ್ಪಡದಂತೆ ತಡೆಯಲು, ಅವುಗಳನ್ನು ಕಬ್ಬಿಣದ ಬಲೆಗಳಿಂದ ಮುಚ್ಚಲಾಗುವುದು. ಅಲ್ಲದೆ ಕಡಲಾಚೆಯ ಗಾಳಿಯ ವೇಗವನ್ನು ತಡೆಯಲು ತಡೆಗೋಡೆ ಉದ್ದಕ್ಕೂ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ADVERTISEMENT

2013ರಲ್ಲಿ ಕೇಂದ್ರಪಾಡ, ಜಗತ್ಸಿಂಗ್‌ಪುರ, ಪುರಿ ಮತ್ತು ಗಂಜಾಂ ಜಿಲ್ಲೆಗಳ ಸಮುದ್ರ ತೀರ ಪ್ರದೇಶದಲ್ಲಿ 52 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲಾಗಿದ್ದು, ಅದು ಕರಾವಳಿಯನ್ನು ಈಗಲೂ ರಕ್ಷಿಸುತ್ತಿದೆ ಎಂದು ರಾತ್‌ ಹೇಳಿದರು.

ಒಡಿಶಾ 480 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಇದರಲ್ಲಿ ಬಹುತೇಕ ಭಾಗ ಚಂಡಮಾರುತಕ್ಕೆ ಗುರಿಯಾಗಿ ಹಾನಿಯಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು, ‘ಯಸ್‌’ ಚಂಡಮಾರುತದ ಹಾನಿಯ ಪರಿಶೀಲನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದರು. ‘ಯಸ್‌’ ಚಂಡಮಾರುತದಿಂದ 125 ಗ್ರಾಮಗಳಿಗೆ ಸಮುದ್ರ ನೀರು ನುಗ್ಗಿ ಕೃಷಿ ಭೂಮಿಗೆ ಹಾನಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.