ADVERTISEMENT

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಭಾರತೀಯ ಪುರುಷರ ಹಾಕಿ ತಂಡ

ಐಎಎನ್ಎಸ್
Published 4 ಜೂನ್ 2023, 7:24 IST
Last Updated 4 ಜೂನ್ 2023, 7:24 IST
ಭಾರತೀಯ ಪುರುಷರ ಹಾಕಿ ತಂಡ
ಭಾರತೀಯ ಪುರುಷರ ಹಾಕಿ ತಂಡ   

ನವದೆಹಲಿ: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಭಾರತೀಯ ಹಿರಿಯ ಪುರುಷರ ಹಾಕಿ ತಂಡ ಆಟಗಾರರು ಒಂದು ನಿಮಿಷ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಬ್ರಿಟನ್‌ ಹಾಗೂ ಬೆಲ್ಜಿಯಂ ವಿರುದ್ಧದ FIH (ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌)ನ ಪ್ರೊ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸಲು ಭಾರತ ತಂಡವು  ಇಂಗ್ಲೆಂಡ್‌ಗೆ ತೆರಳಿದೆ. ಶನಿವಾರ ಬ್ರಿಟನ್‌ ವಿರುದ್ಧ ನಡೆದ ಪ್ರೊ ಲೀಗ್‌ ಪಂದ್ಯದ ಆರಂಭಕ್ಕೂ ಮುನ್ನ ಭಾರತೀಯ ಹಾಕಿ ಆಟಗಾರರು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಿದರು. ಆಟಗಾರರು ಕಪ್ಪು ತೋಳು ಪಟ್ಟಿಗಳನ್ನು ಧರಿಸಿ ಆಟವಾಡಿದರು.


ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್‌ನ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಚೆನ್ನೈಗೆ ಹೋಗುವ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಹೌರಾಕ್ಕೆ ಹೋಗುವ ಎಸ್‌ಎಂವಿಪಿ–ಹೌರಾ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಮಾರು 288 ಜನರು ಮೃತಪಟ್ಟಿದ್ದು,  ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ADVERTISEMENT

ಅಪಘಾತದಲ್ಲಿ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಎಸ್‌ಎಂವಿಟಿ–ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ನ 17 ಬೋಗಿಗಳು ಹಳಿತಪ್ಪಿದ್ದು, ಇದು ಕಳೆದ 15 ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. 

ಎಫ್‌ಐಎಚ್‌ ಅಧ್ಯಕ್ಷ ತಯ್ಯಬ್‌ ಇಕ್ರಮ್‌ ರೈಲು ದುರಂತದ ಕುರಿತು ಸಂದೇಶ ಕಳುಹಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

‘ಎಫ್‌ಐಎಚ್‌ ಪರವಾಗಿ ಮತ್ತು ನನ್ನ ವೈಯಕ್ತಿಕವಾಗಿ, ಈ ಭೀಕರ ರೈಲ್ವೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪವನ್ನು ಬಯಸುತ್ತೇನೆ. ಒಡಿಶಾ ಜಾಗತಿಕ ಹಾಕಿಗೆ ವಿಶೇಷ ಸ್ಥಳವಾಗಿದೆ’ ಎಂದು ಎಫ್‌ಐಎಚ್‌ ಅಧ್ಯಕ್ಷ ನಮನ ಸಲ್ಲಿಸಿದ್ದಾರೆ.

ಭಾರತ ಪುರುಷರ ಹಾಕಿ ತಂಡದಲ್ಲಿ ಒಡಿಶಾದ ಹಲವು ಆಟಗಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.