ADVERTISEMENT

ಗುಡುಗು ಮಳೆ, ಚಂಡಮಾರುತ ಕುರಿತ ಸಂಶೋಧನೆ: ಬಾಲಸೋರ್‌ನಲ್ಲಿ ದೇಶದ ಮೊದಲ ಪ್ರಯೋಗಾಲಯ

ಪಿಟಿಐ
Published 5 ಫೆಬ್ರುವರಿ 2021, 10:52 IST
Last Updated 5 ಫೆಬ್ರುವರಿ 2021, 10:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭುವನೇಶ್ವರ: ಚಂಡಮಾರುತ, ಗುಡುಗು ಸಹಿತ ಮಳೆ ಕುರಿತು ಸಂಶೋಧನೆ ನಡೆಸಲು ದೇಶದಲ್ಲಿಯೇ ಮೊಟ್ಟಮೊದಲ ಸುಸಜ್ಜಿತ ಪ್ರಯೋಗಾಲಯವನ್ನು ಒಡಿಶಾದ ಬಾಲಸೋರ್‌ನಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಥಾಪಿಸಲಿದೆ.

ಚಂಡಮಾರುತ, ಸಿಡಿಲಿನಂಥ ಪ್ರಕೃತಿ ವಿಕೋಪಗಳಿಂದ ಪ್ರಾಣ ಹಾಗೂ ಆಸ್ತಿಗಳಿಗೆ ಆಗುವ ಹಾನಿಯನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಶೋಧನೆ ನಡೆಸುವುದು ಈ ಪ್ರಯೋಗಾಲಯದ ಉದ್ದೇಶ ಎಂದು ಐಎಂಡಿ ಮಹಾ ನಿರ್ದೇಶಕ ಡಾ.ಮೃತ್ಯುಂಜಯ ಮಹಾಪಾತ್ರ ತಿಳಿಸಿದರು.

ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ನೀಡಿದರು. ಭೂವಿಜ್ಞಾನ ಸಚಿವಾಲಯ, ಐಎಂಡಿ, ಡಿಆರ್‌ಡಿಒ ಹಾಗೂ ಇಸ್ರೊ ಸಹಯೋಗದಲ್ಲಿ ಬಾಲಸೋರ್‌ನಲ್ಲಿ ಚಂಡಮಾರುತ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. ಭೋಪಾಲ್‌ ಸಮೀಪ ಸಹ ಇಂಥದೇ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ಇದೆ ಎಂದೂ ಹೇಳಿದರು.

ಭಾರತ ಉಪಖಂಡಕ್ಕೆ ಅಪ್ಪಳಿಸುವ ಚಂಡಮಾರುತಗಳ ಕುರಿತು ಡಾ.ಮಹಾಪಾತ್ರ ಅವರು ನಿಖರವಾದ ಮುನ್ಸೂಚನೆ ನೀಡುವಷ್ಟು ಪರಿಣತಿ ಹೊಂದಿದ್ದಾರೆ. ಹೀಗಾಗಿ ಅವರನ್ನು ‘ಸೈಕ್ಲೋನ್‌ ಮ್ಯಾನ್‌ ಆಫ್‌ ಇಂಡಿಯಾ’ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.