ADVERTISEMENT

ಪ್ರಧಾನಿ, ರಾಷ್ಟ್ರಪತಿಗೆ ಹಣ್ಣು ಬುಟ್ಟಿ ಒಯ್ದಿದ್ದ ಅಧಿಕಾರಿಗೆ ಕೋವಿಡ್‌–19 ದೃಢ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 5:21 IST
Last Updated 22 ಜೂನ್ 2020, 5:21 IST
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ   

ಪಾಟ್ನಾ: ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರುಗಳಿಗೆ ಈ ತಿಂಗಳ ಆರಂಭದಲ್ಲಿ ಲಿಚ್ಚಿ ಹಣ್ಣು ಕೊಡುಗೆ ನೀಡಲು ನವದೆಹಲಿಗೆ ತೆರಳಿದ್ದ ಕೃಷಿ ಇಲಾಖೆಯ ಅಧಿಕಾರಿಗೆ ಕೋವಿಡ್‌–19 ತಗುಲಿರುವುದು ದೃಢಪಟ್ಟಿದೆ.

ಬಿಹಾರಕ್ಕೆ ಜೂನ್ 11ರಂದು ಮರಳಿದ್ದ, ಅವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್‌ 20ರಂದು ಸೋಂಕು ಇರುವುದು ದೃಢಪಟ್ಟಿದ್ದು, ಇಲ್ಲಿನ ಕೋವಿಡ್‌ ಕೇರ್ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ಆದರೆ, ಮುಜಾಫರ್‌ಪುರ್ ಜಿಲ್ಲಾಡಳಿತವು ಸ್ಪಷ್ಟನೆ ನೀಡಿದ್ದು, ಈ ಅಧಿಕಾರಿಗೆ ಹೆಸರಾಂತ ಶಾಹಿ ಲಿಚ್ಚಿ ಹಣ್ಣುಗಳ ಬುಟ್ಟಿಗಳನ್ನು ಸುರಕ್ಷಿತವಾಗಿ, ಸಕಾಲದಲ್ಲಿ ಬಿಹಾರ ಭವನಕ್ಕೆ ತಲುಪಿಸುವ ಹೊಣೆ ಒಪ್ಪಿಸಲಾಗಿತ್ತು ಎಂದು ತಿಳಿಸಿದೆ.

ADVERTISEMENT

‘ದೆಹಲಿಯಲ್ಲಿ ಪ್ರಮುಖರಿಗೆ ಈ ಹಣ್ಣುಗಳ ಬುಟ್ಟಿಗಳನ್ನು ತಲುಪಿಸುವಲ್ಲಿ ಈ ಅಧಿಕಾರಿಯ ಪಾತ್ರವಿರಲಿಲ್ಲ. ಆ ಹೊಣೆಯನ್ನು ನವದೆಹಲಿಯಲ್ಲಿ ಬಿಹಾರ ಭವನದ ಅಧಿಕಾರಿಗಳು ನಿರ್ವಹಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ಪ್ರಸಾದ್‌ ಸಿಂಗ್‌ ವಿವರಣೆ ನೀಡಿದ್ದಾರೆ.

ಸಾರ್ವಜನಿಕ ಸಂಪರ್ಕ ಇಲಾಖೆಯೂ, ‘ಈ ಅಧಿಕಾರಿಯು ಜೂನ್‌ 9ರಂದು ಹಣ್ಣುಗಳ ಬುಟ್ಟಿಗಳನ್ನು ನವದೆಹಲಿಗೆ ಒಯ್ದಿದ್ದರು. ವಿತರಣೆಯಲ್ಲಿ ಈ ಅಧಿಕಾರಿಯ ಪಾತ್ರವೇನೂ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಪಾಟ್ನಾಗೆ ಮರಳಿದ ಬಳಿಕ ಅನಾರೋಗ್ಯ ಪೀಡಿತರಾಗಿದ್ದರು. ಮಾದರಿ ಪರೀಕ್ಷೆಯ ವೇಳೆ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತು. ಹೀಗಾಗಿ, ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲುಪಡಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.