
ಸಾಂಕೇತಿಕ ಚಿತ್ರ
ಬಾಲಸೋರ್: ಪಶ್ಚಿಮ ಬಂಗಾಳದ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಆಕಸ್ಮಿಕವಾಗಿ ನೆರೆಯ ಒಡಿಶಾದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ, ಅವರನ್ನು ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಥಳಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸೂಕ್ಷ್ಮ ವೀಕ್ಷಕ ಅಧಿಕಾರಿಗಳಾಗಿದ್ದ ಇಬ್ಬರು ಬುಧವಾರ ಪಶ್ಚಿಮ ಬಂಗಾಳದ ನಯಾಗ್ರಾಮ್‌ಗೆ ಭೇಟಿ ನೀಡಬೇಕಿತ್ತು. ಆದರೆ ಗಡಿಗೆ ಹೊಂದಿಕೊಂಡ ಬಾಲಸೋರ್ ಜಿಲ್ಲೆಯ ರಾಯ್‌ಬಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಕ್ಕೆ ದಾರಿತಪ್ಪಿ ತೆರಳಿದ್ದರು.
‘ಆಟೊದಲ್ಲಿ ಬಂದವರು ಮಕ್ಕಳ ಅಪಹರಣ ತಂಡಕ್ಕೆ ಸೇರಿದವರು ಎಂದು ಶಂಕಿಸಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ದಾಳಿ ಆಗಿದೆ. ಎಸ್‌ಐಆರ್ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ 72 ಮಂದಿಯನ್ನು ಬಂಧಿಸಿದ್ದು, ಉಳಿದವರ ಶೋಧ ನಡೆದಿದೆ’ ಎಂದು ಬಾಲಸೋರ್ ಎಎಸ್‌ಪಿ ನಿರಂಜನ್ ಬೆಹಿರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.