ಶ್ರೀನಗರ: ಹುತಾತ್ಮರ ದಿನಾಚರಣೆಗೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ (ಎಲ್.ಜಿ) ಆಡಳಿತದ ನಡುವಿನ ತಿಕ್ಕಾಟ ಸೋಮವಾರ ತೀವ್ರಗೊಂಡಿದೆ.
ಭದ್ರತಾ ಪಡೆಗಳ ಬಿಗಿ ಬಂದೋಬಸ್ತ್ ಭೇದಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪೊಲೀಸರು ನಿರ್ಮಿಸಿದ್ದ ತಡೆಗೋಡೆಯನ್ನು ಹತ್ತಿಳಿದು, ಹುತಾತ್ಮರ ಸ್ಮಾರಕದ ಆವರಣ ಪ್ರವೇಶಿಸಿ ಸಮಾಧಿಗಳ ಬಳಿ ಪ್ರಾರ್ಥಿಸಿದರು.
ಒಮರ್ ಅಬ್ದುಲ್ಲಾ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು, ನ್ಯಾಷನಲ್ ಕಾನ್ಫರೆನ್ಸ್ (ಎನ್.ಸಿ) ಪಕ್ಷದ ಮುಖಂಡರೊಂದಿಗೆ ಹುತಾತ್ಮರ ಸ್ಮಾರಕ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ತಡೆದರು. ಹಳೆಯ ನಗರದ ಖವಾಜಾ ಬಜಾರ್ ಬಳಿ ಈ ನಾಟಕೀಯ ದೃಶ್ಯ ಕಂಡುಬಂದವು.
ಮುಖ್ಯಮಂತ್ರಿಯ ಅಶ್ವದಳವು ಹಳೆಯ ನಗರದ ಖನ್ಯಾರ್ ತಲುಪುತ್ತಿದ್ದಂತೆ ಭಾರಿ ಬಿಗಿಬಂದೋಬಸ್ತ್ ಎದುರಾಯಿತು. ತಕ್ಷಣವೇ ತಮ್ಮ ವಾಹನದಿಂದ ಇಳಿದ ಒಮರ್ ಹುತಾತ್ಮರ ಸ್ಮಾರಕಕ್ಕೆ ತೆರಳಲು ಒಂದು ಕಿ.ಮೀ. ನಡೆದರು. ದಾರಿಯುದ್ದಕ್ಕೂ ಭದ್ರತಾ ತಡೆಗೋಡೆ ನಿರ್ಮಿಸಲಾಗಿತ್ತು.
ಸ್ಮಾರಕದ ಸನಿಹ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿಯು ಮುಖ್ಯಮಂತ್ರಿಯನ್ನು ತಡೆಯಲು ಯತ್ನಿಸಿದರು. ಇದನ್ನು ಲೆಕ್ಕಿಸದೆ ಅಬ್ದುಲ್ಲಾ ತಡೆಗೋಡೆಯನ್ನೇ ಹತ್ತಿಳಿದು ಸ್ಮಶಾನದ ಆವರಣ ಪ್ರವೇಶಿಸಿದರು. ಹುತಾತ್ಮರ ಸಮಾಧಿ ಮುಂಭಾಗ ಪ್ರಾರ್ಥಿಸಿದರು.
ಹುತಾತ್ಮರ ಸ್ಮಾರಕದ ಬಾಗಿಲನ್ನು ತೆರೆಯುವ ಹೊತ್ತಿಗೆ ಬಹುತೇಕ ಸಚಿವರು, ಎನ್.ಸಿ ನಾಯಕರು ಸಹ ತಡೆಗೋಡೆಯನ್ನು ಹತ್ತಿಳಿದು ಸಮಾಧಿಯ ಆವರಣವನ್ನು ಪ್ರವೇಶಿಸಿದರು.
‘ಪ್ರಾರ್ಥನೆಗೆ ಅವಕಾಶ ಕೊಡದಿರುವುದು ದುಃಖಕರ. ಗೃಹಬಂಧನದಲ್ಲಿಟ್ಟಿದ್ದು ಲಜ್ಜೆಗೇಡಿತನ. ನಮ್ಮನ್ನು ತಡೆಯಲು ಯತ್ನಿಸಿದರು. ಹಲ್ಲೆ ನಡೆಸಿದರು. ಭಾನುವಾರವೂ ನಿರ್ಬಂಧವಿತ್ತು. ಈಗಲೂ ಏಕೆ ತಡೆದರು’ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
‘ಸ್ವತಂತ್ರ ದೇಶವಿದು. ಆದರೆ ನಮ್ಮನ್ನು ಗುಲಾಮರೆಂದು ಭಾವಿಸಿದ್ದಾರೆ. ನಾವು ಆಡಳಿತಗಾರರಲ್ಲ, ಜನ ಸೇವಕರು. ಭದ್ರತಾ ಸಿಬ್ಬಂದಿಯು ಸಮಸವ್ತ್ರದಲ್ಲಿರುವಾಗ ಕಾನೂನನ್ನು ಏಕೆ ನಾಶಪಡಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕಾನೂನುಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ. ಆದರೂ ಪೊಲೀಸರು ಯಾವ ಕಾನೂನಿನಡಿ ಪ್ರಾರ್ಥಿಸುವುದನ್ನು ತಡೆಯಲು ಯತ್ನಿಸಿದರು ಎಂಬುದನ್ನು ವಿವರಿಸಬೇಕಿದೆ.- ಒಮರ್ ಅಬ್ದುಲ್ಲಾ, ಮುಖ್ಯಮಂತ್ರಿ
‘ಹುತಾತ್ಮರಿಗೆ ಗೌರವ ಅರ್ಪಿಸುವುದನ್ನು ಎಲ್.ಜಿ ಆಡಳಿತ ಎಷ್ಟು ಸಮಯ ತಡೆಹಿಡಿಯಬಹುದು? ಅವರು ಸದಾ ಕಾಲ ಇಲ್ಲಿಯೇ ಇರುತ್ತಾರೆ. ನಮ್ಮ ಮನಸ್ಸು ಬಯಸಿದಾಗಲೆಲ್ಲಾ ಇಲ್ಲಿಗೆ ಬಂದು ಪ್ರಾರ್ಥಿಸುತ್ತೇವೆ’ ಎಂದರು.
‘ಜನರಿಂದ ಆಯ್ಕೆಯಾಗದ ಸರ್ಕಾರವು ಹಾದಿಯಲ್ಲೇ ನನ್ನನ್ನು ತಡೆಯಲು ಯತ್ನಿಸಿತು. ನೌಹತ್ತ ಚೌಕ್‌ನಿಂದ ನಡೆಸಿತು. ತಡೆಗೋಡೆ ಏರುವಂತೆ ಮಾಡಿತು. ದೈಹಿಕವಾಗಿಯೂ ತಡೆಯಲು ಪ್ರಯತ್ನಿಸಿತು. ಆದರೂ, ಎಲ್ಲ ಅಡೆತಡೆಗಳನ್ನು ದಾಟಿ ನಾನು ಅಲ್ಲಿಗೆ ಹೋಗುವುದನ್ನು ಇಂದು ತಡೆಯಲಾಗಲಿಲ್ಲ. ಪೊಲೀಸರ ಸಕಲ ಪ್ರಯತ್ನವನ್ನು ವಿಫಲಗೊಳಿಸಿದೆವು’ ಎಂದು ಒಮರ್ ಅಬ್ದುಲ್ಲಾ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
ಹುತಾತ್ಮರ ಸ್ಮಾರಕವು ಸೂಫಿ ಸಂತ ನಕ್ಷಬಂದ್ ಸಮಾಧಿ ಸನಿಹದಲ್ಲಿದೆ.
ಪ್ರಮುಖ ಘಟನಾವಳಿ
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆಟೊರಿಕ್ಷಾದಲ್ಲಿ ಹಾಗೂ ಶಿಕ್ಷಣ ಸಚಿವರಾದ ಸಕೀನಾ ಇಟ್ಟೂ ಸ್ಕೂಟಿಯಲ್ಲಿ ಹಿಂಬದಿ ಸವಾರರಾಗಿ ಸ್ಮಾರಕ ತಲುಪಿದರು
ಶ್ರೀನಗರದ ಖಾನ್ಯಾರ್ ಮತ್ತು ನೌಹತ್ತ ಚೌಕ್‌ನ ಎರಡು ಕಡೆಯಿಂದ ಹುತಾತ್ಮರ ಸ್ಮಾರಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಭದ್ರತಾ ಪಡೆಗಳು ಮುಚ್ಚಿದ್ದವು
ಹುತಾತ್ಮರ ದಿನದಂದು ಸ್ಮಾರಕಕ್ಕೆ ಭೇಟಿ ನೀಡುವುದನ್ನು ತಡೆಯಲಿಕ್ಕಾಗಿಯೇ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಸಂಘಟನೆಗಳ ನಾಯಕರನ್ನು ಭಾನುವಾರ ಗೃಹಬಂಧನಕ್ಕೊಳಪಡಿಸಲಾಗಿತ್ತು
ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡುವುದಕ್ಕೆ ಸತತ ಎರಡನೇ ವರ್ಷವೂ ನಿಷೇಧ * ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಮುಖಂಡರಿಂದ ಎಲ್‌ಜಿ ವಿರುದ್ಧ ವಾಗ್ದಾಳಿ
ನಿರಾಯುಧ ಕಾಶ್ಮೀರಿಗಳ ಹತ್ಯೆ
ನಿರಂಕುಶ ಆಡಳಿತಗಾರನಾಗಿದ್ದ ಮಹಾರಾಜ ಹರಿಸಿಂಗ್ ವಿರುದ್ಧ ಜನರು ದಂಗೆ ಏಳುವಂತೆ ಪ್ರಚೋದಿಸಿದ ಆರೋಪದ ಮೇಲೆ ಅಬ್ದುಲ್ ಖಾದೀರ್ ಖಾನ್ ಅವರನ್ನು ಬಂಧಿಸಲಾಗಿತ್ತು. ಖಾದೀರ್ ಬೆಂಬಲಿಸಿ ಕಾಶ್ಮೀರಿಗರು ಶ್ರೀನಗರದ ಕೇಂದ್ರ ಕಾರಾಗೃಹದ ಮುಂಭಾಗ ಪ್ರತಿಭಟಿಸಿದರು. ಹರಿಸಿಂಗ್‌ನ ಡೋಗ್ರಾ ಸೇನೆಯು 1931ರ ಜುಲೈ 13ರಂದು ನಿರಾಯುಧ ಕಾಶ್ಮೀರಿಗರ ಮೇಲೆ ಗುಂಡಿನ ಮಳೆ ಸುರಿಸಿದ್ದರಿಂದ 22 ಜನರು ಹತರಾದರು.
ದಬ್ಬಾಳಿಕೆ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನಡೆದ ಹೋರಾಟ ಗೌರವಿಸಲಿಕ್ಕಾಗಿ ಜಮ್ಮು–ಕಾಶ್ಮೀರದಲ್ಲಿ ಜುಲೈ 13 ಅನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಮ್ಮು–ಕಾಶ್ಮೀರ ಸರ್ಕಾರವು ಜುಲೈ 13ಅನ್ನು ರಜೆ ದಿನವನ್ನಾಗಿ ಘೋಷಿಸಿತ್ತು. ಆದರೆ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟ ನಂತರ 2020ರಿಂದ ರಜೆಯನ್ನು ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.