ಏಕತೆಯ ಪ್ರತಿಮೆ ಮುಂದೆ ಸಿಎಂ ಒಮರ್ ಅಬ್ದುಲ್ಲಾ
ಅಹಮದಾಬಾದ್: ಪ್ರವಾಸೋದ್ಯಮ ಅಭಿವೃದ್ಧಿ ಸಭೆಗಾಗಿ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಗುರುವಾರ ಸಂಜೆ ಏಕ್ತಾ ನಗರದಲ್ಲಿರುವ ಸರ್ದಾರ್ ವಲ್ಲಾಬಾಯಿ ಪಟೇಲ್ ಅವರ ಏಕತೆಯ ಪ್ರತಿಮೆ (‘ಸ್ಟ್ಯಾಚು ಆಫ್ ಯನಿಟಿ’) ಸ್ಮಾರಕಕ್ಕೆ ಭೇಟಿ ನೀಡಿದ್ದರು.
ಏಕತೆಯ ಪ್ರತಿಮೆ ಮುಂದೆ ಒಮರ್ ಅಬ್ದುಲ್ಲಾ ನಿಂತಿರುವ ಫೋಟೊ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ನಿಮ್ಮನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾಶ್ಮಿರದಿಂದ ಕಾವಡಿಯಾ (ಏಕ್ತಾ ನಗರ)ಕ್ಕೆ ಬಂದಿದಿರಾ. ತುಂಬಾ ಖುಷಿಯಾಗುತ್ತದೆ ಹೀಗೆ ನಿಮ್ಮನ್ನು ನೋಡುವುದಕ್ಕೆ ನೀವು ಏಕತೆಯ ಸಂದೇಶವನ್ನು ಹೊತ್ತು ತಂದಿದ್ದೀರಿ. ಭಾರತದ ಜನರು ಭಾರತದ ಹಲವೆಡೆ ಹೀಗೆ ಏಕತೆ ಸಂದೇಶ ಸಾರುತ್ತಾ ಪ್ರವಾಸ ಮಾಡುತ್ತಾರೆ ಎನ್ನುವ ಭಾವನೆ ನನ್ನದು ಎಂದು ಮೋದಿ ಬಣ್ಣಿಸಿದ್ದಾರೆ.
ಇನ್ನು ಅಹಮದಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಒಮರ್ ಅಬ್ದುಲ್ಲಾ ಅವರು, 'ಪ್ರವಾಸೋದ್ಯಮದ ಮೇಲೆ ಪಹಲ್ಗಾಮ್ ದಾಳಿಯು ಪರಿಣಾಮ ಬೀರಿರುವುದನ್ನು ಇಲ್ಲ ಎನ್ನುವುದಿಲ್ಲ. ಪ್ರವಾಸದ ಸೀಸನ್ ಆರಂಭದಲ್ಲೇ ದಾಳಿ ನಡೆದ ಪರಿಣಾಮ, ಪ್ರವಾಸಿಗರು ರಾತ್ರೋರಾತ್ರಿ ಕಣಿವೆಯಿಂದ ಹೊರನಡೆದರು. ಆದರೆ, ಕಾಶ್ಮೀರ ಖಾಲಿಯಾಗಿಲ್ಲ. ನಾವಿಲ್ಲಿಗೆ ಹತಾಶೆಯಿಂದ ಬಂದಿಲ್ಲ. ಹೆಚ್ಚು ಜನರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂಬುದು ನಮ್ಮ ಬಯಕೆ. ಹಾಗಾಗಿ, ಯಾವುದೇ ರೀತಿಯ ತಪ್ಪು ತಿಳಿವಳಿಕೆ ಬೇಡ. ಮಾತಾ ವೈಷ್ಣೋದೇವಿ ಯಾತ್ರೆ ಹಾಗೂ ಅಮರನಾಥ ಯಾತ್ರೆ ಸಲುವಾಗಿ ಲಕ್ಷಾಂತರ ಜನರು (ಪಹಲ್ಗಾಮ್ ದಾಳಿ ಬಳಿಕ) ಈಗಾಗಲೇ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ' ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾಶ್ಮೀರದ ಟ್ರಾವೆಲ್ ಏಜೆಂಟ್ಸ್ ಸೊಸೈಟಿ (ಟಿಎಎಸ್‌ಕೆ) ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಉತ್ತೇಜನ ಕಾರ್ಯಕ್ರಮದ ಭಾಗವಾಗಿ ಅಬ್ದುಲ್ಲಾ ಗುಜರಾತ್‌ಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.