ADVERTISEMENT

J&K: ಕುಟುಂಬದ ಬಿಗಿ ಹಿಡಿತವಿರುವ ಗಾಂದರ್‌ಬಲ್ ಕ್ಷೇತ್ರದಿಂದ ಒಮರ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 15:44 IST
Last Updated 25 ಆಗಸ್ಟ್ 2024, 15:44 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ/ಗಾಂದರ್‌ಬಲ್: ಅಜ್ಜ ಶೇಖ್‌ ಮೊಹಮ್ಮದ್‌ ಅಬ್ದುಲ್ಲಾ, ತಂದೆ ಫಾರುಕ್‌ ಅಬ್ದುಲ್ಲಾ.. ಹೀಗೆ ಒಮರ್‌ ಅಬ್ದುಲ್ಲಾ ಅವರ ಕುಟುಂಬದವರು ಹಿಂದಿನಿಂದಲೂ ಪ್ರತಿನಿಧಿಸುತ್ತಾ ಬಂದಿರುವ ಗಾಂದರ್‌ಬಲ್ ಕ್ಷೇತ್ರದಿಂದಲೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಒಮರ್‌ ಅವರು ಸ್ಪರ್ಧಿಸಲಿದ್ದಾರೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಭಾನುವಾರ ಘೋಷಿಸಿದೆ.

ನ್ಯಾಷನಲ್‌ ಕಾನ್ಫರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷರಾಗಿರುವ ಒಮರ್‌ ಅಬ್ದುಲ್ಲಾ ಕೂಡ ಇದೇ ಕ್ಷೇತ್ರದಿಂದ ಹಲವು ಬಾರಿ ಸ್ಪರ್ಧಿಸಿದ್ದರು. ಒಮ್ಮೆ ಶಾಸಕರಾಗಿಯೂ ಆಯ್ಕೆ ಆಗಿದ್ದರು. ಆದರೆ, 2008ರ ನಂತರ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. ಸುಮಾರು 16 ವರ್ಷಗಳ ಬಳಿಕ ಈ ಮತ್ತೊಮ್ಮೆ ತಮ್ಮ ಕುಟುಂಬದ ಬಿಗಿ ಹಿಡಿತವಿರುವ ಗಾಂದರ್‌ಬಲ್‌ನಿಂದ ಅವರು ಸ್ಪರ್ಧಿಸುತ್ತಿದ್ದಾರೆ.

ಒಮರ್‌ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಬ್ದುಲ್ಲಾ ಅವರ ಕುಟುಂಬವು ಮತ್ತೊಮ್ಮೆ ಮುನ್ನಲೆಗೆ ಬರುತ್ತಿರುವುದರ ಸಂಕೇತ ಎಂದೇ ರಾಜಕೀಯ ವಿಶ್ಲೇಷಕರು ಚರ್ಚಿಸುತ್ತಿದ್ದಾರೆ.

ADVERTISEMENT

2002ರಲ್ಲಿ ಮೊದಲ ಬಾರಿಗೆ ಒಮರ್‌ ಅವರು ಇಲ್ಲಿಂದ ಸ್ಪರ್ಧಿಸಿದ್ದರು. ಆಗ ಅವರು ಪಿಡಿಪಿ ಪಕ್ಷದ ಖಾಜಿ ಮೊಹಮ್ಮದ್‌ ಅಫ್ಜಲ್‌ ಅವರ ಎದುರು ಸೋತಿದ್ದರು. ನಂತರ 2008ರಲ್ಲಿ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅಫ್ಜಲ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಒಮರ್‌ ಅವರು ಗಾಂದರ್‌ಬಲ್ ಬದಲು ಬೇರೆ ಕ್ಷೇತ್ರವನ್ನು ಆರಿಸಿಕೊಂಡಿದ್ದರು.

‘ನಮ್ಮ ವಿರುದ್ಧ ಅಭ್ಯರ್ಥಿ ನಿಲ್ಲಿಸಬೇಡಿ’

ನಮ್ಮ ಅಜೆಂಡಾಗಳನ್ನು ಒಪ್ಪಿಕೊಂಡರೆ ಎನ್‌ಸಿ–ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ನೀವು (ಪಿಡಿಪಿ) ಹೇಳಿದ್ದೀರಿ. ಈಗ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇರುವುದನ್ನೇ ನೀವು ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದೀರಿ. ಆದ್ದರಿಂದ ನಮ್ಮ ಮೈತ್ರಿಯ ಅಜೆಂಡಾವನ್ನು ನೀವು ಒಪ್ಪಿಕೊಂಡಂತಾಯಿತು. ಹಾಗಾಗಿ ನಮ್ಮ ಮೈತ್ರಿಕೂಟದ ಅಭ್ಯರ್ಥಿ ಎದುರು ನೀವು ನಿಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ. ಜಮ್ಮು ಮತ್ತು ಕಾಶ್ಮೀರದ ಉತ್ತಮ ನಾಳೆಗಳಿಗಾಗಿ ನೀವೂ ನಮ್ಮ ಜೊತೆಯಾಗಿ ಒಮರ್‌ ಅಬ್ದುಲ್ಲಾ ಉಪಾಧ್ಯಕ್ಷ ಎನ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.