ಚಂಡೀಗಢ: ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕ, ಸುಖ್‌ಬೀರ್ ಸಿಂಗ್ ಬಾದಲ್ ಅವರು ಧಾರ್ಮಿಕ ಶಿಕ್ಷೆಯ ಆರನೇ ದಿನ ಫತೇಗಢ ಸಾಹಿಬ್‌ನಲ್ಲಿರುವ ಗುರುದ್ವಾರದಲ್ಲಿ ಭಾನುವಾರ ‘ಸೇವಾದಾರ’ನಾಗಿ ಕೆಲಸ ಮಾಡಿದರು.
ಗಾಲಿ ಕುರ್ಚಿಯನ್ನು ಆಶ್ರಯಿಸಿರುವ ಅವರು ‘ಕೀರ್ತನೆ’ಗಳನ್ನು ಆಲಿಸಿದರಲ್ಲದೆ, ಗುರುದ್ವಾರದ ಹೊರಭಾಗದಲ್ಲಿ ಪಾತ್ರೆ ತೊಳೆಯುವ ಕೆಲಸವನ್ನೂ ನಿರ್ವಹಿಸಿದರು.
‘ಸೇವಾದಾರ’ರು ಧರಿಸುವ ನೀಲಿ ಬಣ್ಣದ ಸಮವಸ್ತ್ರ ತೊಟ್ಟಿದ್ದ ಅವರು ಬೆಳಿಗ್ಗೆ 9 ಗಂಟೆಗೆ ಗುರುದ್ವಾರಕ್ಕೆ ಬಂದರು. ಬಾದಲ್ ಅವರಿಗೆ ಝಡ್ ಪ್ಲಸ್ ದರ್ಜೆಯ ಭದ್ರತೆ ನೀಡಲಾಗಿದ್ದು, ಗುರುದ್ವಾರಕ್ಕೆ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪಂಜಾಬ್‌ನಲ್ಲಿ 2007ರಿಂದ 2017ರವರೆಗೆ ಎಸ್‌ಎಡಿ ಪಕ್ಷದ ಅಧಿಕಾರ ಅವಧಿಯಲ್ಲಿ ಆಗಿರುವ ‘ತಪ್ಪುಗಳಿಗೆ’ ಪ್ರಾಯಶ್ಚಿತ್ತವಾಗಿ 62 ವರ್ಷದ ಬಾದಲ್, ಧಾರ್ಮಿಕ ಶಿಕ್ಷೆಗೆ ಗುರಿಯಾಗಿದ್ದಾರೆ.
ಅಮೃತಸರದ ಸ್ವರ್ಣಮಂದಿರ ಅಲ್ಲದೆ, ಇತರ ನಾಲ್ಕು ಗುರುದ್ವಾರಗಳಲ್ಲಿ ತಲಾ ಎರಡು ದಿನ ‘ಸೇವಾದಾರ’ ಆಗಿ ಕೆಲಸ ಮಾಡುವ ಶಿಕ್ಷೆ ಅವರಿಗೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.