ADVERTISEMENT

ಬೆಂಗಳೂರು ಸೇರಿ 8 ನಗರಗಳಲ್ಲಿ ವಾಯುಮಾಲಿನ್ಯದಿಂದ ಅಕಾಲಿಕ ಸಾವುಗಳು

2005–2018ರ ಅವಧಿಯಲ್ಲಿ 1 ಲಕ್ಷ ಅಕಾಲಿಕ ಸಾವು

ಪಿಟಿಐ
Published 11 ಏಪ್ರಿಲ್ 2022, 19:30 IST
Last Updated 11 ಏಪ್ರಿಲ್ 2022, 19:30 IST
ಕೃಷಿ ತ್ಯಾಜ್ಯಗಳ ಸುಡುತ್ತಿರುವುದು (ಸಂಗ್ರಹ ಚಿತ್ರ)
ಕೃಷಿ ತ್ಯಾಜ್ಯಗಳ ಸುಡುತ್ತಿರುವುದು (ಸಂಗ್ರಹ ಚಿತ್ರ)   

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ಎಂಟು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ 2005 ರಿಂದ 2018ರ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಅಕಾಲಿಕವಾಗಿ ಮೃತಪಟ್ಟಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಬೆಂಗಳೂರು ಹೊರತುಪಡಿಸಿ ಮುಂಬೈ, ಕೋಲ್ಕತ್ತ, ಹೈದರಾಬಾದ್‌, ಚೆನ್ನೈ, ಸೂರತ್, ಪುಣೆ, ಅಹಮದಾಬಾದ್ ನಗರಗಳಲ್ಲಿ ಈ ಅಕಾಲಿಕ ಸಾವುಗಳು ಸಂಭವಿಸಿವೆ ಎಂದು ವರದಿ ಉಲ್ಲೇಖಿಸಿದೆ.

ನಾಸಾ, ಯೂರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ (ಇಎಸ್‌ಎ) ಉಪಗ್ರಹಗಳಿಂದ ಪಡೆದ, ಏಷ್ಯಾ, ಆಫ್ರಿಕಾ, ಮಧ್ಯ ಏಷ್ಯಾದ 46 ನಗರಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಅಧ್ಯಯನ ಆಧರಿಸಿದೆ. ವರದಿ ‘ಸೈನ್ಸ್ ಅಡ್ವಾನ್ಸಸ್’ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.

ADVERTISEMENT

ಬಾಂಗ್ಲಾದೇಶದ ಢಾಕಾದಲ್ಲಿ ಉಲ್ಲೇಖಿತ ಅವಧಿಯಲ್ಲಿ 24 ಸಾವಿರ ಅಕಾಲಿಕ ಸಾವುಗಳು ಸಂಭವಿಸಿದ್ದರೆ, ಬೆಂಗಳೂರು ಸೇರಿದಂತೆ ಭಾರತದ ಇತರೆ ನಗರಗಳಲ್ಲಿ ಸುಮಾರು 1 ಲಕ್ಷ ಅಕಾಲಿಕ ಸಾವುಗಳು ಸಂಭವಿಸಿವೆ.

ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿರುವ ನೈಟ್ರೊಜನ್‌ ಡೈಆಕ್ಸೈಡ್‌ (ಎನ್‌ಒ2) ಪ್ರಮಾಣ ಶೇ 14ರಷ್ಟು, ವಿಕಿರಣ ಅಂಶಗಳು (ಪಿಎಂ2.5) ಶೇ 8ರಷ್ಟು ಪ್ರತಿ ವಾರ್ಷಿಕ ಸೇರುತ್ತಿವೆ ಎಂದು ಅಧ್ಯಯನ ನಡೆಸಿದ ಸಂಶೋಧಕರು ತಿಳಿಸಿದ್ದಾರೆ. ಅಲ್ಲದೆ, ಅಮೋನಿಯಾ ಪ್ರಮಾಣವು ವಾರ್ಷಿಕ ಶೇ 12ರಷ್ಟು ಹಾಗೂ ಸಾವಯವ ಧಾತುಗಳು ಪ್ರಮಾಣ ಶೇ 11ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

‘ವಾತಾವರಣ ಕ್ಷಿಪ್ರಗತಿಯಲ್ಲಿ ಮಾಲಿನ್ಯಗೊಳ್ಳುತ್ತಿದೆ.ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು ವಾತಾವರಣ ಸೇರುತ್ತಿವೆ.ಈ ವರದಿಯ ಫಲಿತಾಂಶಗಳು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಒತ್ತಾಸೆಯಾಗಬಹುದು’ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು, ಹೀಗೆ ಕ್ಷಿಪ್ರಗತಿಯ ವಾಯುಮಾಲಿನ್ಯಕ್ಕೆ ಕೈಗಾರೀಕರಣ, ವಾಹನಗಳ ದಟ್ಟಣೆ, ತ್ಯಾಜ್ಯವನ್ನು ಸುಡುವಿಕೆ, ಇದ್ದಿಲು ಮತ್ತು ಉರುವಲುವಿನ ವ್ಯಾಪಕ ಬಳಕೆ ಕಾರಣ ಎಂದು ತಿಳಿಸಿದ್ದಾರೆ.

ಕೃಷಿ ತ್ಯಾಜ್ಯಗಳ ಸುಡುವಿಕೆಯು ವಾಯುಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಇಂಗ್ಲೆಂಡ್‌ನ ಲಂಡನ್‌ ಯೂನಿವರ್ಸಿಟಿ ಕಾಲೇಜ್‌ನ ಕರ್ನ್‌ ವೊಹ್ರಾ ಹೇಳಿದ್ದಾರೆ.

ವಾಯುಮಾಲಿನ್ಯದ ಗಂಭೀರ ಸ್ವರೂಪದ ಪರಿಣಾಮಗಳು ಮುಂದಿನ ದಶಕದಲ್ಲಿ ಕಾಣಿಸಬಹುದು. ನಕಾರಾತ್ಮಕ ಪರಿಣಾಮಗಳಿಂದ ಪಾಠ ಕಲಿಯದೇ ಮಾಲಿನ್ಯದ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಅಧ್ಯಯನ ವರದಿಯ ಸಹ ಲೇಖಕ ಮರಾಯಿಸ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.