ADVERTISEMENT

ಪಂಜಾಬ್‌ನಲ್ಲಿ ಹಿಂದೂ ಅರ್ಚಕರ ಹತ್ಯೆ: ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ಪಿಟಿಐ
Published 24 ಸೆಪ್ಟೆಂಬರ್ 2022, 4:33 IST
Last Updated 24 ಸೆಪ್ಟೆಂಬರ್ 2022, 4:33 IST
ಎನ್‌ಐಎ
ಎನ್‌ಐಎ   

ನವದೆಹಲಿ: ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ವರ್ಷ ಹಿಂದೂ ಅರ್ಚಕರ ಹತ್ಯೆಗೆ ಖಲಿಸ್ತಾನ ಟೈಗರ್‌ ಫೋರ್ಸ್‌ (ಕೆಟಿಎಫ್‌) ಉಗ್ರರು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತೊಂದು ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಉತ್ತರ ಪ್ರದೇಶದ ಮೀರತ್‌ನ ಸಂಗತ್‌ ಪುರ ಮೊಹಲ್ಲಾ ನಿವಾಸಿ ಗಗನ್‌ದೀಪ್‌ ಸಿಂಗ್‌ ಅಲಿಯಾಸ್‌ 'ಗಗ್ಗು' ಈ ಪ್ರಕರಣ ಐದನೇ ಆರೋಪಿ ಎಂದು ಪಂಜಾಬ್‌ನ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ತಿಳಿಸಿದೆ.

ಕೆನಡಾ ಮೂಲದ ಕೆಟಿಎಫ್‌ ಮುಖ್ಯಸ್ಥ ಹರದೀಪ್‌ ಸಿಂಗ್‌ ನಿಜ್ಜಾರ್‌, ಆತನ ಸಹಚರರಾದ ಅರ್ಶದೀಪ್‌ ಸಿಂಗ್ ಅಲಿಯಾಸ್‌ 'ಪ್ರಭ್‌', ಕಮಲ್‌ಜೀತ್‌ ಶರ್ಮಾ ಮತ್ತು ರಾಮ್‌ ಸಿಂಗ್‌ ಅಲಿಯಾಸ್‌ 'ಸೋನಾ' ವಿರುದ್ಧ ಜೂನ್‌ 4 ರಂದು ಚಾರ್ಚ್‌ಶೀಟ್‌ ದಾಖಲಿಸಿತ್ತು.

ADVERTISEMENT

ನಿಜ್ಜಾರ್‌ ಬಂಧನಕ್ಕೆ ಪೂರಕ ಮಾಹಿತಿ ನೀಡುವವರಿಗೆ ₹ 10 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಜುಲೈ 22ರಂದು ಘೋಷಿಸಿತ್ತು.

ಪಂಜಾಬ್‌ನಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಲುವಾಗಿ ರೂಪಿಸಿದ್ದ ಹತ್ಯೆಯ ಸಂಚು ಕೆನಡಾ ಮೂಲದವರಾದ ನಿಜ್ಜಾರ್‌ ಮತ್ತು ಅರ್ಶದೀಪ್‌ ನಿರ್ದೇಶನದಂತೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.ಅರ್ಶದೀಪ್‌ ಸೂಚನೆಯಂತೆ ಗಗನ್‌ದೀಪ್‌ ಒದಗಿಸಿದ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಲಾಗಿತ್ತು ಎಂದು ಎನ್‌ಐಎ ಮಾಹಿತಿ ನೀಡಿದೆ.

ಅರ್ಚಕಕಮಲ್‌ದೀಪ್‌ ಶರ್ಮಾ ಅವರನ್ನು ಕಳೆದ ವರ್ಷ ಜನವರಿ 31ರಂದು ಜಲಂಧರ್‌ನಲ್ಲಿ ಹತ್ಯೆ ಮಾಡಲಾಗಿತ್ತು.ಅಕ್ಟೋಬರ್ 8, 2021 ರಂದು ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.