ADVERTISEMENT

ಪುದುಚೇರಿ: ಮತ್ತೊಬ್ಬ ಕಾಂಗ್ರೆಸ್‌ ಶಾಸಕ ರಾಜೀನಾಮೆ

ಅಲ್ಪಮತಕ್ಕೆ ಕುಸಿದ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ

ಪಿಟಿಐ
Published 21 ಫೆಬ್ರುವರಿ 2021, 12:08 IST
Last Updated 21 ಫೆಬ್ರುವರಿ 2021, 12:08 IST

ಪುದುಚೇರಿ: ಪುದುಚೇರಿಯಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಭಾನುವಾರ ರಾಜೀನಾಮೆ ನೀಡಿದ್ದಾರೆ. ಇದರಿಂದ, ಇದೇ 22ರಂದು ಬಹುಮತ ಸಾಬೀತುಪಡಿಸಲಿರುವ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಕೆ. ಲಕ್ಷ್ಮಿನಾರಾಯಣನ್‌ ಅವರು ಭಾನುವಾರ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ ವಿ.ಪಿ. ಶಿವಕೊಲುಂಧು ಅವರಿಗೆ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿರುವುದಾಗಿ ಲಕ್ಷ್ಮಿನಾರಾಯಣನ್‌ ತಿಳಿಸಿದ್ದಾರೆ.

ಲಕ್ಷ್ಮಿನಾರಾಯಣನ್‌ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರ ಸಂಖ್ಯೆ 13ಕ್ಕೆ ಕುಸಿದಿದೆ. ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಐದು ಸ್ಥಾನಗಳು ಖಾಲಿ ಉಳಿದಿವೆ.

ADVERTISEMENT

ಮಾಜಿ ಸಚಿವರಾದ ಎ.ನಮಶಿವಯಂ ಮತ್ತು ಮಲ್ಲಾಡಿ ಕೃಷ್ಣ ರಾವ್‌ ಸೇರಿದಂತೆ ನಾಲ್ವರು ಕಾಂಗ್ರೆಸ್‌ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.