ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ತೀವ್ರ ವಿರೋಧದ ನಡುವೆಯೇ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಅವಕಾಶ ಕಲ್ಪಿಸುವ ಎರಡು ಮಸೂದೆಗಳನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿತು.
‘ಮಸೂದೆಯು ಒಕ್ಕೂಟ ವ್ಯವಸ್ಥೆಯ ವಿರೋಧಿ ಹಾಗೂ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ’ ಎಂದು ವಿಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ‘ಪ್ರಸ್ತಾಪಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ’ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸಮರ್ಥಿಸಿಕೊಂಡರು.
ವಿವಾದಿತ ಮಸೂದೆಯನ್ನು ಮಂಡಿಸಲೇಬಾರದು ಎಂದು ವಿಪಕ್ಷ ಸದಸ್ಯರು ಹಟ ಹಿಡಿದರು. ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಾಮರ್ಶೆಗೆ ಕಳುಹಿಸಲು ಸರ್ಕಾರ ಇಂಗಿತ ವ್ಯಕ್ತಪಡಿಸಿತು.
‘ಮಸೂದೆಯನ್ನು ಈಗ ಸಮಿತಿಗೆ ಕಳುಹಿಸೋಣ. ಸಮಿತಿಯು ವಿಸ್ತೃತ ಚರ್ಚೆ ನಡೆಸಲಿದೆ. ಆ ಬಳಿಕ ಮಸೂದೆ ಸದನಕ್ಕೆ ಬರಲಿದೆ. ಆಗ ಮಸೂದೆಯ ಸಾಧಕ–ಬಾಧಕಗಳ ಬಗ್ಗೆ ಎಷ್ಟು ದಿನ ಬೇಕಾದರೂ ಚರ್ಚೆ ನಡೆಸೋಣ’ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ವಿರೋಧ ಪಕ್ಷಗಳ ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಒಪ್ಪದ ವಿಪಕ್ಷ ಸದಸ್ಯರು ಮತ ವಿಭಜನೆಗೆ ಪಟ್ಟು ಹಿಡಿದರು. ಮಸೂದೆಯನ್ನು ಸದನದಲ್ಲಿ ಮಂಡಿಸಬಹುದೇ ಎಂದು ಪ್ರಶ್ನಿಸಿ ಮತಕ್ಕೆ ಹಾಕಲಾಯಿತು. ಪರವಾಗಿ 269 ಮತಗಳು ಹಾಗೂ ವಿರುದ್ಧವಾಗಿ 198 ಮತಗಳು ಬಿದ್ದವು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಅಂಗೀಕಾರಗೊಳ್ಳಲು ಮೂರನೇ ಎರಡರಷ್ಟು ಬಹುಮತ ಬೇಕು. ಆದರೆ, ಮಸೂದೆ ಮಂಡನೆ ಪರವಾಗಿ ಬಿದ್ದ ಮತಗಳ ಪ್ರಮಾಣ, ಮೂರನೇ ಎರಡರಷ್ಟು ಬಹುಮತಕ್ಕಿಂತ ತುಂಬಾ ಕಡಿಮೆ ಇದೆ.
ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ–2024 ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾದ ಮತ್ತೊಂದು ಮಸೂದೆ. ಕೇಂದ್ರಾಡಳಿತ ಪ್ರದೇಶಗಳಲ್ಲೂ ಏಕಕಾಲಕ್ಕೆ ಚುನಾವಣೆ ನಡೆಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ಮಸೂದೆಯ ಅಂಗೀಕಾರಕ್ಕೆ ಸರಳ ಬಹುಮತ ಸಾಕು.
ಮಸೂದೆಗಳ ಮಂಡನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಾಜರಿರಲಿಲ್ಲ.
‘ಮಸೂದೆಯು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. ರಾಜ್ಯಗಳಿಗೆ ಚುನಾವಣೆಗಳನ್ನು ಯಾವಾಗ ನಡೆಸಬೇಕು ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. ರಾಜ್ಯಗಳನ್ನು ಕೇಂದ್ರ ಸರ್ಕಾರಕ್ಕೆ ಅಧೀನಗೊಳಿಸುತ್ತದೆ. ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುತ್ತದೆ’ ಎಂಬ ಕಾರಣ ನೀಡಿ ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ವಿಪಕ್ಷಗಳ ಆರೋಪವನ್ನು ಕಾನೂನು ಸಚಿವರು ತಳ್ಳಿ ಹಾಕಿದರು. ಹೆಚ್ಚಿನ ಪರಿಶೀಲನೆಗಾಗಿ ಎರಡು ಮಸೂದೆಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸುವ ವಿವರವಾದ ನಿರ್ಣಯವನ್ನು ಶೀಘ್ರದಲ್ಲೇ ಮಂಡಿಸುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ತಿಳಿಸಿದರು.
ಮಸೂದೆ ಮಂಡಿಸುವುದನ್ನು ವಿರೋಧಿಸಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ತೃಣಮೂಲ ಕಾಂಗ್ರೆಸ್, ಮುಸ್ಲಿಂ ಲೀಗ್, ಶಿವಸೇನೆ (ಯುಬಿಟಿ), ಎಐಎಂಐಎಂ, ಸಿಪಿಐ(ಎಂ), ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಆರ್‌ಎಸ್‌ಪಿ ಸಂಸದರು ನೋಟಿಸ್‌ಗಳನ್ನು ಸಲ್ಲಿಸಿದ್ದರು.
ಈ ಮಸೂದೆಗೆ ಕೆಲವು ದಿನಗಳ ಹಿಂದೆ ಸಂಪುಟದಲ್ಲಿ ಅಂಗೀಕಾರ ನೀಡಲಾಗಿತ್ತು. ಆಗ ಪ್ರಧಾನಿಯವರು ವಿಸ್ತೃತ ಚರ್ಚೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂದು ಹೇಳಿದ್ದರು. ಜೆಪಿಸಿಯಲ್ಲಿ ವಿವರವಾದ ಚರ್ಚೆಗಳು ನಡೆಯಲಿವೆ. ಜೆಪಿಸಿಯ ವರದಿಯನ್ನು ಸಂಪುಟ ಅನುಮೋದಿಸುತ್ತದೆ. ಮತ್ತೆ ಸದನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಯಲಿದೆ–ಅಮಿತ್ ಶಾ, ಕೇಂದ್ರ ಗೃಹ ಸಚಿವ
ಈ ಮಸೂದೆ ಸಂವಿಧಾನ ಹಾಗೂ ದೇಶದ ನಾಗರಿಕರ ಮತದಾನದ ಹಕ್ಕುಗಳಿಗೆ ವಿರುದ್ಧವಾಗಿದೆ. ಈ ಮಸೂದೆ ಚುನಾವಣಾ ಆಯೋಗಕ್ಕೆ ಅಸಾಂವಿಧಾನಿಕ ಅಧಿಕಾರ ನೀಡುತ್ತದ. ಚುನಾವಣೆ ನಡೆಸಲು ರಾಷ್ಟ್ರಪತಿ ಅವರಿಗೆ ಸಲಹೆ ನೀಡುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ–ಗೌರವ್ ಗೊಗೊಯ್, ಲೋಕಸಭೆಯ ವಿರೋಧ ಪಕ್ಷದ ಉಪನಾಯಕ
ಅಂಗೀಕಾರಕ್ಕೆ ಸದನದಲ್ಲಿ ಬೇಕು ಮೂರನೇ ಎರಡರಷ್ಟು ಬಹುಮತ
ಮಸೂದೆಗಳಲ್ಲಿ ಒಂದಾದ ‘ಸಂವಿಧಾನ (129 ನೇ ತಿದ್ದುಪಡಿ) ಮಸೂದೆ– 2024’ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕಿದೆ. ಹೀಗಾಗಿ, ಮೂರು ಪ್ರಮುಖ ವಿರೋಧ ಪಕ್ಷಗಳಾದ ಡಿಎಂಕೆ, ಸಮಾಜವಾದಿ ಪಕ್ಷ ಅಥವಾ ತೃಣಮೂಲ ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಟ್ಟು ಬೆಂಬಲ ಪಡೆಯದಿದ್ದರೆ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯುವುದು ಕೇಂದ್ರ ಸರ್ಕಾರಕ್ಕೆ ಕಷ್ಟವಾಗಬಹುದು. ಆದರೆ, ಈ ಪಕ್ಷಗಳು ಈಗಾಗಲೇ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಲೋಕಸಭೆಯಲ್ಲಿ ಎನ್‌ಡಿಎ 293 ಸದಸ್ಯರ ಬಲ (ಸ್ಪೀಕರ್ ಸೇರಿ) ಹೊಂದಿದೆ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟವು 236 ಸಂಸದರ ಬೆಂಬಲ (ಮೂವರು ಪಕ್ಷೇತರ ಸದಸ್ಯರು ಸೇರಿ) ಹೊಂದಿದೆ. ಒಂಬತ್ತು ಸಂಸದರನ್ನು ಹೊಂದಿರುವ ಆರು ಪಕ್ಷಗಳು ಯಾವುದೇ ಮಿತ್ರಕೂಟದಲ್ಲಿ ಗುರುತಿಸಿಕೊಂಡಿಲ್ಲ. ಇದರಲ್ಲಿ ಅಕಾಲಿದಳ, ಎಐಎಂಐಎಂ ಮತ್ತು ಎಎಸ್‌ಪಿ (ಕಾನ್ಶಿ ರಾಮ್) ಸಂಸದರು ಮಸೂದೆಗಳನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಈ ಹಿಂದೆ ಏಕಕಾಲಿಕ ಚುನಾವಣೆಯನ್ನು ಬೆಂಬಲಿಸಿತ್ತು. ಈ ಪಕ್ಷವು ನಾಲ್ವರು ಸಂಸದರನ್ನು ಹೊಂದಿದೆ. ಟಿಡಿಪಿಯು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಬಳಿಕ ಈ ಪಕ್ಷವು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಈ ಪಕ್ಷವು ಮಸೂದೆ ಕುರಿತ ತನ್ನ ನಿಲುವು ಬದಲಾಯಿಸುವ ಸಾಧ್ಯತೆ ಇದೆ.
ನಾಲ್ವರು ಪಕ್ಷೇತರ ಸಂಸದರಾದ ಇಂಜಿನಿಯರ್ ರಶೀದ್, ಅಮೃತಪಾಲ್ ಸಿಂಗ್, ಸರಬ್ಜೀತ್ ಖಾಲ್ಸಾ ಮತ್ತು ಉಮೇಶ್‌ಬಾಯಿ ಪಟೇಲ್ ಅವರು ತಮ್ಮ ನಿಲುವು ತಿಳಿಸಿಲ್ಲ. 543 ಸದಸ್ಯ ಬಲದ ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ. ಸದನವು ಪೂರ್ಣ ಬಲದಲ್ಲಿದ್ದಾಗ ಮೂರನೇ ಎರಡರಷ್ಟು ಬಹುಮತಕ್ಕೆ 362 ಮತಗಳ ಅಗತ್ಯವಿದೆ.
ರಾಜ್ಯಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ 125 ಸಂಸದರ ಬೆಂಬಲ ಹೊಂದಿದೆ. ಇಂಡಿಯಾ ಮೈತ್ರಿಕೂಟದ ಬಲ 86. ವೈಎಸ್‌ಆರ್ ಕಾಂಗ್ರೆಸ್ ಎಂಟು, ಬಿಜೆಡಿ ಏಳು, ಎಐಎಡಿಎಂಕೆ 4, ಬಿಆರ್‌ಎಸ್ 4 ಮತ್ತು ಬಿಎಸ್‌ಪಿ 1 ಸಂಸದರನ್ನು ಮೇಲ್ಮನೆಯಲ್ಲಿ ಹೊಂದಿವೆ.
ಈ ಮಸೂದೆಗಳು ಮೂಲಭೂತ ರಚನೆಯ ಸಿದ್ಧಾಂತದ ಮೇಲೆ ದಾಳಿ ಮಾಡಿಲ್ಲ. ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ. ನ್ಯಾಯಾಂಗ ಪರಾಮರ್ಶೆ, ಸಂವಿಧಾನದ ಒಕ್ಕೂಟ ಸ್ವರೂಪ, ಜಾತ್ಯತೀತ ಗುಣ, ಸಂವಿಧಾನದ ಪರಮಾಧಿಕಾರದಂತಹ ತತ್ವಗಳ ಬದಲಾವಣೆ ಆಗುವುದಿಲ್ಲ. ರಾಜಕೀಯದ ಕಾರಣದಿಂದ ವಿಪಕ್ಷಗಳ ಸದಸ್ಯರು ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ.–ಅರ್ಜುನ್ ರಾಮ್ ಮೇಘವಾಲ್, ಕಾನೂನು ಸಚಿವ
ಮಸೂದೆಗಳು ಸರ್ವಾಧಿಕಾರ ತರುವ ಪ್ರಯತ್ನ. ಈ ಕ್ರಮವು ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ, ಬಡವರು, ಹಿಂದುಳಿದವರು ಮತ್ತು ಮುಸ್ಲಿಂ ವಿರೋಧಿ.–ಧರ್ಮೇಂದ್ರ ಯಾದವ್, ಸಮಾಜವಾದಿ ಪಕ್ಷ
ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ಅಥವಾ ಸಂಸತ್ತಿಗೆ ಅಧೀನವಾಗಿಲ್ಲ. ಇದು ಚುನಾವಣಾ ಸುಧಾರಣೆ ಅಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಆಕಾಂಕ್ಷೆಗಳಿಗೆ ಅನುಗುಣವಾಗಿದೆ.–ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ
ಈ ಮಸೂದೆಯು ಅಧ್ಯಕ್ಷೀಯ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ರಾಜಕೀಯ ಲಾಭದ ಗುರಿಯನ್ನಷ್ಟೇ ಹೊಂದಿದೆ. ಇದು ಜಾರಿಯಾದರೆ ಪ್ರಾದೇಶಿಕ ಪಕ್ಷಗಳು ನಾಶವಾಗಲಿವೆ. ಇದೊಂದು ಕರಾಳ ಮಸೂದೆ.–ಅಸಾದುದ್ದೀನ್ ಒವೈಸಿ, ಎಐಎಂಐಎಂ
ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತವಿಲ್ಲ. ಐದು ವರ್ಷ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಮತದಾರರಿಗೆ ಇದೆ. ಈ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಹೆಚ್ಚಿನ ಪರಾಮರ್ಶೆಗೆ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು.–ಟಿ.ಆರ್.ಬಾಲು, ಡಿಎಂಕೆ
ಲೋಕಸಭೆಯೊಂದಿಗೆ ನಿರ್ದಿಷ್ಟ ರಾಜ್ಯಕ್ಕೆ ಚುನಾವಣೆ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವುದು ಸರಿಯಲ್ಲ.–ಅನಿಲ್ ದೇಸಾಯಿ, ಶಿವಸೇನಾ (ಯುಬಿಟಿ)
ಈ ಮಸೂದೆಗಳು ದೇಶದಲ್ಲಿ ಸರ್ವಾಧಿಕಾರಕ್ಕೆ ಕಾರಣವಾಗುತ್ತವೆ.–ಅಮ್ರಾ ರಾಮ್, ಸಿಪಿಎಂ
ವಿಧಾನಸಭೆಗಳನ್ನು ವಿಸರ್ಜಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ನೀಡುವುದು ತರವಲ್ಲ. ಮಸೂದೆ ಮಂಡಿಸಿದರೂ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು.–ಸುಪ್ರಿಯಾ ಸುಳೆ, ಎನ್‌ಸಿಪಿ (ಶರದ್ ಪವಾರ್ ಬಣ)
ಮಸೂದೆಯು ಅಸ್ಪಷ್ಟ. 2029ರ ನಂತರ 17 ವಿಧಾನಸಭೆ ಗಳಿಗೆ ಚುನಾವಣೆಗಳು ನಡೆಯಲಿವೆ. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ಅವುಗಳ ಅಧಿಕಾರಾವಧಿ ಮೊಟಕುಗೊಳ್ಳಲಿದೆ.–ಎನ್.ಕೆ. ಪ್ರೇಮಚಂದ್ರನ್, ಆರ್‌ಎಸ್‌ಪಿ
ಕಳೆದ ಆರು ತಿಂಗಳಿಂದ ವಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪ್ರತಿ ಸುಧಾರಣೆಯನ್ನೂ ಅಸಾಂವಿಧಾನಿಕ ಎಂದು ಬಿಂಬಿಸುತ್ತಿದೆ. ವಿಪಕ್ಷಗಳಿಗೆ ಸುಧಾರಣೆಗಳೆಂದರೆ ಅಲರ್ಜಿ.–ಶ್ರೀಕಾಂತ್ ಶಿಂದೆ, ಶಿವಸೇನಾ
ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆಗೆ ಪಕ್ಷದ ಬೆಂಬಲ ಇದೆ. ಇದರಿಂದ ಚುನಾವಣಾ ವೆಚ್ಚ ಕಡಿಮೆಯಾಗಲಿದೆ.–ಚಂದ್ರಶೇಖರ್ ಪೆಮ್ಮಸಾನಿ, ಕೇಂದ್ರ ಸಚಿವ (ಟಿಡಿಪಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.