ADVERTISEMENT

ಅಂಡಮಾನ್‌: ಮೊದಲ ಬಾರಿ 10ನೇ ತರಗತಿ ಉತ್ತೀರ್ಣರಾದ ‘ಒಂಗೆ’ ಬುಡಕಟ್ಟಿನ 9 ಮಕ್ಕಳು

ಮೊದಲ ಬಾರಿ 10ನೇ ತರಗತಿ ಉತ್ತೀರ್ಣರಾದ ದೇಶದ ಪ್ರಾಚೀನ ಜನಾಂಗದ ಮಕ್ಕಳು

ಪಿಟಿಐ
Published 20 ಜುಲೈ 2025, 14:52 IST
Last Updated 20 ಜುಲೈ 2025, 14:52 IST
   

ಪೋರ್ಟ್‌ಬ್ಲೇರ್: ವಿನಾಶದ ಅಂಚಿನಲ್ಲಿರುವ, ಭಾರತದ ಪ್ರಾಚೀನ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ‘ಒಂಗೆ’ ಬುಡಕಟ್ಟಿನ 9  ಮಂದಿ ಮಕ್ಕಳು ಇದೇ ಮೊದಲ ಬಾರಿಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

‘ಒಂಗೆ’ ಬುಡಕಟ್ಟಿನ ಒಟ್ಟು ಜನಸಂಖ್ಯೆಯೇ 136ರ ಆಸುಪಾಸಿನಲ್ಲಿದೆ. ಈ ಸಮುದಾಯದಲ್ಲಿ ಪ್ರೌಢಶಾಲಾ ಹಂತದವರೆಗಿನ  ಶಿಕ್ಷಣ ಪೂರೈಸಿರುವ ಮೊದಲ ತಲೆಮಾರು ಎಂಬ ಹೆಗ್ಗಳಿಕೆ ಈ 9 ಮಕ್ಕಳದ್ದು. ಇವರಲ್ಲಿ ಐವರು ಬಾಲಕಿಯರೂ ಇದ್ದಾರೆ ಎನ್ನುವುದು ವಿಶೇಷ.

ಅಲಗೆ, ಕೊಕೊಯಿ, ಮುಕೇಶ್‌, ಪಾಲಿತ್‌, ಸೋನಿಯಾ, ಬೋಲಿಂಗ್‌, ಗಿಟೆ, ಒಟಿಕಾಲೈ ಮತ್ತು ಸುಮಾ ಎಂಬ ವಿದ್ಯಾರ್ಥಿಗಳು ಈಗ ಒಂಗೆ ಸಮುದಾಯದ ನವ ತಾರೆಗಳು. ಇವರೆಲ್ಲರೂ ಈಗಾಗಲೇ ಅಂಡಮಾನ್‌ನ ಡಗಾಂಗ್‌ ಕ್ರೀಕ್‌ ಪ್ರದೇಶದ ಆರ್‌.ಕೆ ಪುರದ ಪಿ.ಎಂ ಶ್ರೀ ಸರ್ಕಾರಿ ಸೀನಿಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ 11ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.

ADVERTISEMENT

‘ಈ ಮಕ್ಕಳು ಬುದ್ಧಿವಂತರು ಮತ್ತು ಪರಿಶ್ರಮಿಗಳು. ಉನ್ನತ ಶಿಕ್ಷಣ ಪಡೆದು, ಉದ್ಯೋಗ ದಕ್ಕಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಅತೀವ ತುಡಿತವನ್ನು ಹೊಂದಿದ್ದಾರೆ’ ಎಂದು ಹೇಳಿದರು ಶಾಲೆಯ ಶಿಕ್ಷಕ ಪ್ರಕಾಶ್‌ ಟಿರ್ಕಿ. 

ಒಂಗೆ ಮಕ್ಕಳಿಗಾಗಿ  ಪ್ರತ್ಯೇಕ ಕೊಠಡಿ:

ಅಂಡಮಾನ್‌  ಆದಿಮ್‌ ಜನಹಿತ ವಿಕಾಸ್‌ ಸಮಿತಿಯ (ಎಎಜೆವಿಎಸ್‌) ಸಲಹೆಯಂತೆ, ಒಂಗೆ ಬುಡಕಟ್ಟು ಮಕ್ಕಳಿಗಾಗಿ ಶಾಲೆಯಲ್ಲಿ ಪ್ರತ್ಯೇಕ ತರಗತಿ ಕೋಣೆಯನ್ನು ನಿರ್ಮಿಸಲಾಗಿದೆ ಎಂದು ಪಿ.ಎಂ. ಶ್ರೀ ಜಿಎಸ್‌ಎಸ್‌ ಆರ್‌.ಕೆ. ಪುರ ಶಾಲೆಯ ಪ್ರಾಂಶುಪಾಲರು ಹೇಳಿದರು. 

ಶಾಲೆಯ ಸಮೀಪವೇ ಈ ಮಕ್ಕಳಿಗಾಗಿ ಪ್ರತ್ಯೇಕ ವಸತಿ ನಿಲಯದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ. ಮಕ್ಕಳಿಗೆ ಬೇಕಾಗುವ ಬಟ್ಟೆ, ಪಡಿತರ, ಕಲಿಕಾ ಸಾಮಗ್ರಿಗಳನ್ನು ‘ಎಎಜೆವಿಎಸ್‌’ ಪೂರೈಸಲಿದೆ.

‘ಮಕ್ಕಳು ಸಾಂಪ್ರದಾಯಿಕ ಬುಡಕಟ್ಟು ಪರಿಸರದಿಂದ ಹೊರಬಂದು, ಶಾಲೆಯ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಅವರಲ್ಲಿ  ಶಿಕ್ಷಣ ಪಡೆಯುವ ಅದಮ್ಯ ಬಯಕೆ ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.