ADVERTISEMENT

ಆನ್‌ಲೈನ್ ಗೇಮಿಂಗ್ ನಿಷೇಧ: ಆಟಕ್ಕೆ ಅಂಕುಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:41 IST
Last Updated 22 ನವೆಂಬರ್ 2020, 20:41 IST
.
.   

ಜೂಜಿನ ಸ್ವರೂಪದ ಆನ್‌ಲೈನ್ ಆಟಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಶನಿವಾರ ಸುಗ್ರೀವಾಜ್ಞೆ ಹೊರಡಿಸಿದೆ. ಆನ್‌ಲೈನ್‌ನಲ್ಲಿ ಇಂತಹ ಆಟಗಳನ್ನು ಆಡುವವರಿಗೆ ಮತ್ತು ಆಟಗಳನ್ನು ನಡೆಸುವವರಿಗೆ ಈ ಸುಗ್ರೀವಾಜ್ಞೆ ಅಡಿ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿದೆ. ತಮಿಳುನಾಡು ಸರ್ಕಾರದ ಈ ಕ್ರಮದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಸಹ ಇಂತಹ ಆನ್‌ಲೈನ್ ಆಟ‌ಗಳನ್ನು ನಿಷೇಧಿಸುವ ಇಂಗಿತ ವ್ಯಕ್ತಪಡಿಸಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಇಂತಹ ನಿಷೇಧ ಜಾರಿಯಲ್ಲಿದೆ.

ಯಾವುದಕ್ಕೆಲ್ಲಾನಿಷೇಧ ಅನ್ವಯ:ಜೂಜಿನ ಉದ್ದೇಶದಿಂದ, ವ್ಯಕ್ತಿಗಳೊಂದಿಗೆ ಆನ್‌ಲೈನ್‌ನಲ್ಲಿ ನಡೆಯುವ ಆಟಗಳಿಗೆ ಇದು ಅನ್ವಯವಾಗಲಿದೆ.ಆನ್‌ಲೈನ್‌ ಬೆಟ್ಟಿಂಗ್ ಆಟಗಳಿಗೆಮತ್ತು ಇನ್‌-ಆ್ಯಪ್ ಪರ್ಚೇಸ್ ಆನ್‌ಲೈನ್‌ ಆಟ‌ಗಳಿಗೆ ಈ ನಿಷೇಧ ಅನ್ವಯವಾಗಲಿದೆ.

ADVERTISEMENT

ಪಬ್‌ಜಿ (ಪಿಯುಬಿಜಿ) (ಭಾರತದಲ್ಲಿ ನಿಷೇಧವಾಗಿದೆ), ಕೌಂಟರ್‌ ಸ್ಟ್ರೈಕ್‌ನಂತಹ ಆಟ‌ಗಳಿಗೂ ಇದು ಅನ್ವಯವಾಗಲಿದೆ. ಈ ಸ್ವರೂಪದ ಆಟ‌ಗಳಲ್ಲಿ ಆಟಗಾರರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಸಲಕರಣೆಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಲು ಹಣ ಪಾವತಿಸಬೇಕಿತ್ತು. ಇದಕ್ಕಾಗಿ ಕೆಲವು ನೂರು ರೂ.ಗಳಿಂದ ಸಾವಿರಾರು ರೂ.ಗಳವರೆಗೂ ಪಾವತಿ ಮಾಡಬೇಕಿತ್ತು. ಇನ್‌-ಆ್ಯಪ್‌ ಪರ್ಚೇಸ್‌ ಇರುವ ಆಟಗಳನ್ನು ನಿಷೇಧಿಸಲಾಗಿದೆ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಹೀಗಾಗಿ ಇನ್‌-ಆ್ಯಪ್‌ ಪರ್ಚೇಸ್‌ ಇರುವ ಎಲ್ಲಾ ಆನ್‌ಲೈನ್ ಆಟ‌ಗಳಿಗೂ ಇದು ಅನ್ವಯವಾಗಲಿದೆ.

ಆನ್‌ಲೈನ್ ಕಾರ್ಡ್‌ ಆಟಗಳಾದ ರಮ್ಮಿ, ಪೋಕರ್, ಬ್ಲ್ಯಾಕ್‌ಜ್ಯಾಕ್‌ಗಳಲ್ಲಿ ಆಟ ಆರಂಭಿಸುವ ಮುನ್ನವೇ ಆಟಗಾರರು ನಿಗದಿತ ಮೊತ್ತದ ಠೇವಣಿ ಇಡಬೇಕು.ಆಟ ಮುಂದುವರಿದಂತೆ, ಆಟಗಾರರು ಜೂಜಿಗಾಗಿ ಮತ್ತಷ್ಟು ಹಣವನ್ನು ಹೂಡುತ್ತಾ ಹೋಗಬೇಕು. ಹೀಗೆ ಜೂಜಿಗೆ ಇಡಬಹುದಾದ ಮೊತ್ತದ ಮೇಲೆ ಗರಿಷ್ಠ ಮಿತಿ ಇಲ್ಲ.ಅಲ್ಲದೆ ಸ್ಮಾರ್ಟ್‌ಫೋನ್‌ಗಳಲ್ಲಿ ಇವನ್ನು ಆಡಬಹುದಾದ ಕಾರಣ, ಎಲ್ಲೋ ಕೂತು ಜೂಜಾಡಬಹುದು. ಹೀಗಾಗಿ ಸಾಮಾನ್ಯರೂ ಇದರಲ್ಲಿ ಹಣ ಹೂಡಿಕೆ ಮಾಡಿ, ನಷ್ಟ ಮಾಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಹಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ.ಇಂತಹ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಕಾರಣ, ತಮಿಳುನಾಡು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.