ADVERTISEMENT

ಕಾಂಗ್ರೆಸ್‍ಗೆ ದೇಶಪ್ರೇಮ ಕಲಿಸಲು ಬಿಜೆಪಿ ಬರುವುದು ಬೇಡ: ಉಮ್ಮನ್ ಚಾಂಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 13:04 IST
Last Updated 4 ಮಾರ್ಚ್ 2019, 13:04 IST
   

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ದೇಶದ ಭದ್ರತಾ ವ್ಯವಸ್ಥೆಯನ್ನು ರಾಜಕೀಯಕ್ಕೆ ಬಳಸುತ್ತಿರುವುದನ್ನಷ್ಟೇ ವಿಪಕ್ಷಗಳು ಪ್ರಶ್ನಿಸುತ್ತಿರುವುದು ಎಂದು ಕೇರಳದ ವಿಪಕ್ಷ ನೇತಾರ, ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಹೇಳಿದ್ದಾರೆ.

ಬಾಲಾಕೋಟ್ ದಾಳಿ ಬಗ್ಗೆ ಸೇನಾಪಡೆಯಲ್ಲಿ ವಿಪಕ್ಷಗಳು ದಾಖಲೆ ಕೇಳುತ್ತಿವೆ ಎಂಬ ಮೋದಿಯ ಆರೋಪ ಸತ್ಯಕ್ಕೆ ದೂರವಾದುದು. ಬಾಲಾಕೋಟ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಸತ್ತವರ ಸಂಖ್ಯೆಯನ್ನು ನಾವು ಲೆಕ್ಕ ಹಾಕುವುದಿಲ್ಲ.ಎಷ್ಟು ಜನ ಸತ್ತಿದ್ದಾರೆ ಎಂಬುದನ್ನು ಸರ್ಕಾರವೇ ಹೇಳಬೇಕು ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೇಳಿದ್ದಾರೆ.ಆದರೆ 300ಕ್ಕಿಂತಲೂ ಹೆಚ್ಚು ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ನೀಡಿದ ಅನಧಿಕೃತ ಮಾಹಿತಿ ಅದಾಗಿತ್ತು ಎಂಬುದು ಸ್ಪಷ್ಟವಾಗಿದೆ. ಇದರ ಬಗ್ಗೆ ಯಾರೂ ಪ್ರಶ್ನಿಸಿಲ್ಲ.ಆದರೆ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ದಾಳಿ ನಡೆದ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಮಾಡಿದ ವರದಿಗೂ ಇನ್ನಿತರ ವರದಿಗಳಿಗೂ ಇದು ತಾಳೆಯಾಗುತ್ತಿಲ್ಲ. ಈ ದಾಳಿಯ ಉದ್ದೇಶ ಮನುಷ್ಯರನ್ನು ಹತ್ಯೆ ಮಾಡುವುದು ಆಗಿರಲಿಲ್ಲ ಎಂದುಕೇಂದ್ರ ಸಚಿವ ಅಹ್ಲುವಾಲಿಯಾಹೇಳಿದ್ದರು. ಮನುಷ್ಯರನ್ನು ಕೊಲ್ಲುವುದಲ್ಲ ಪಾಕಿಸ್ತಾನಕ್ಕೆ ಭಯ ಹುಟ್ಟಿಸುವುದು ದಾಳಿಯ ಗುರಿ ಆಗಿತ್ತು ಎಂದು ಅವರು ಹೇಳಿದ್ದರು.

ಆದರೆ ಪಾಕ್ ಮೇಲೆ ನಡೆಸಿದ ವಾಯುದಾಳಿಯಲ್ಲಿ ಉಗ್ರರನ್ನು ಕೊಲ್ಲುವುದು ಗುರಿಯಾಗಿತ್ತು ಎಂದು ದೇಶದ ಜನರು ನಂಬಿದ್ದಾರೆ.ಎಷ್ಟು ಉಗ್ರರು ಹತ್ಯೆಯಾದರು ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು ಅಂತಾರೆ ವಾಯುಪಡೆಯ ಮುಖ್ಯಸ್ಥ. ಹೀಗಿರುವಾಗ ಮೋದಿ ಈ ಬಗ್ಗೆ ಮಾಹಿತಿ ನೀಡಬೇಕಿದೆ. ಜನರ ಸಂದೇಹಗಳನ್ನು ದೂರ ಮಾಡಬೇಕಾದ ಜವಾಬ್ದಾರಿ ಮೋದಿಗೆ ಇದೆ ಎಂದಿದ್ದಾರೆ ಚಾಂಡಿ.

ಪಾಕಿಸ್ತಾನದ ಮೇಲಿನ ನಿರ್ದಿಷ್ಟ ದಾಳಿಯಿಂದ ಬಿಜೆಪಿಗೆ ಸೀಟು ಗೆಲ್ಲಲು ಸಹಾಯವಾಗುತ್ತದೆ ಎಂದು ಹೇಳಿದ್ದುಬಿಜೆಪಿ ನಾಯಕರೇ. ಇದಾದನಂತರ ಅವಕಾಶ ಸಿಕ್ಕಿದಾಗಲೆಲ್ಲಾ ಬಿಜೆಪಿ ನಾಯಕರು ಈ ವಿಷಯವನ್ನು ರಾಜಕೀಯಕ್ಕಾಗಿ ಬಳಸಿಕೊಂಡರು. ಇದನ್ನು ಬೊಟ್ಟು ಮಾಡಿ ತೋರಿಸಿದರೆ ಪ್ರಧಾನಿ ವಿಪಕ್ಷಗಳ ಮೇಲೆ ಹರಿಹಾಯುತ್ತಾರೆ.ಕಾಂಗ್ರೆಸ್ ಮತ್ತು ದೇಶದ ಜನರು ಸೇನೆಗೆ ಬೆಂಬಲವಾಗಿ ನಿಂತಿದ್ದಾರೆ.ವಿಂಗ್ ಕಮಾಂಡರ್ ಅಭಿನಂದನ್ ಅವರ ಶೌರ್ಯದ ಬಗ್ಗೆ ನಮಗೆ ಹೆಮ್ಮೆಯಿದೆ.

ಅಟಲ್ ಬಿಹಾರಿ ವಾಜಪೇಯಿ ಅವರೇ ದುರ್ಗೆ ಎಂದು ಕರೆದ ಇಂದಿರಾಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮದ ಬಗ್ಗೆ ಪಾಠ ಮಾಡಲು ಬಿಜೆಪಿ ಅಷ್ಟೊಂದು ಬೆಳೆದಿಲ್ಲ ಎಂದು ಉಮ್ಮನ್ ಚಾಂಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.