ಗ್ಯಾಂಗ್ಟಕ್: ದೇಶದಲ್ಲಿ ಉಗ್ರವಾದ ಸೃಷ್ಟಿಸುವವರಿಗೆ ಆಪರೇಷನ್ ಸಿಂಧೂರ್ ತಕ್ಕ ಪ್ರತ್ಯುತ್ತರವಾಗಿದೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಾದಿಸಿದರು.
ಪ್ರತಿಕೂಲ ಹವಾಮಾನದ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಸಿಕ್ಕಿಂ ಭೇಟಿಯನ್ನು ರದ್ದುಗೊಳಿಸಿ, ಸಿಕ್ಕಿಂ ಉದಯದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದರು.
ಹಿಮಾಲಯದ ಈ ರಾಜ್ಯವು ದೇಶದ ಹೆಮ್ಮೆ, ಈ ಭಾಗದ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.
ಆಪರೇಷನ್ ಸಿಂಧೂರ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಿದವರಿಗೆ ತಕ್ಕ ಪ್ರತ್ಯುತ್ತರವಾಗಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾಡಿದ್ದು ಮಾನವೀಯತೆ ಮೇಲಿನ ದಾಳಿಯಾಗಿದೆ. ನಾವು ಈಗ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಂದಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ಸಿಕ್ಕಿಂ ಉದಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸಿದ್ದೆ, ಆದರೆ ಪ್ರತಿಕೂಲ ಹವಾಮಾನದಿಂದ ಬರಲು ಸಾಧ್ಯವಾಗಲಿಲ್ಲ ಎಂದರು.
ಜಾಗತಿಕವಾಗಿ ಭಾರತವನ್ನು ಕ್ರೀಡಾ ಮಹಾಶಕ್ತಿಯಾಗಿ ಬೆಳೆಸಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ, ಸಿಕ್ಕಿಂ ಸೇರಿದಂತೆ ಈಶಾನ್ಯದ ರಾಜ್ಯಗಳು ಈ ದಿಕ್ಕಿನಲ್ಲಿ ಸಾಗಬೇಕು ಎಂದು ಪ್ರಧಾನಿ ಹೇಳಿದರು.
ಸಿಕ್ಕಿಂ ಸಾಹಸ ಕ್ರೀಡೆಗಳ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂದ ಅವರು, ಇಲ್ಲಿ ಸಾವಯವ ಉತ್ಪನ್ನಗಳ ರಫ್ತು ಹೆಚ್ಚಾಗುತ್ತಿರುವುದು ರಾಜ್ಯದ ದೊಡ್ಡ ಸಾಧನೆಯಾಗಿದೆ ಎಂದರು.
ಸಿಕ್ಕಿಂ ಜೀವವೈವಿಧ್ಯದಲ್ಲಿ ಸಮೃದ್ಧವಾಗಿದೆ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿ ಮಾದರಿಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.