ADVERTISEMENT

ಸಿಂಧೂರ: ಉಗ್ರವಾದ ವಿರುದ್ಧದ ಹೋರಾಟಕ್ಕೆ ನಿದರ್ಶನವಾಗಲಿದೆ; ರಾಷ್ಟ್ರಪತಿ ಮುರ್ಮು

ಸ್ವಾತಂತ್ರ್ಯೋತ್ಸವ: ದೇಶ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು

ಪಿಟಿಐ
Published 14 ಆಗಸ್ಟ್ 2025, 16:11 IST
Last Updated 14 ಆಗಸ್ಟ್ 2025, 16:11 IST
<div class="paragraphs"><p>ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು <strong>- ಪಿಟಿಐ ಚಿತ್ರ</strong>&nbsp; </p></div>

ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು - ಪಿಟಿಐ ಚಿತ್ರ 

   

ನವದೆಹಲಿ: ‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ದೇಶವು ದಿಟ್ಟ ಉತ್ತರ ನೀಡಿದೆ. ಭಾರತ ಕೈಗೊಂಡ ಆಪರೇಷನ್‌ ಸಿಂಧೂರ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಿದರ್ಶನವಾಗಿ ಇತಿಹಾಸದಲ್ಲಿ ಉಳಿಯಲಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಹೇಳಿದ್ದಾರೆ.

79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

‘ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆ ಹೇಡಿತನದ ಮತ್ತು ಅಮಾನವೀಯ ಕೃತ್ಯ’ ಎಂದು ಖಂಡಿಸಿದ ಅವರು, ‘ಪ್ರತೀಕಾರವಾಗಿ ಸಶಸ್ತ್ರ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ ಮೂಲಸೌಕರ್ಯಗಳನ್ನು ನಾಶಪಡಿಸಲಾಯಿತು. ಇದು ದೇಶದಲ್ಲಿನ ಒಗ್ಗಟ್ಟು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆಯನ್ನು ತೋರಿಸುತ್ತದೆ’ ಎಂದು ಬಣ್ಣಿಸಿದರು.

‘ದೇಶವನ್ನು ವಿಭಜಿಸಲು ಯತ್ನಿಸಿದವರಿಗೆ, ಒಗ್ಗಟ್ಟು ಪ್ರದರ್ಶಿಸುವ ಮೂಲಕ ದೇಶದ ಜನತೆ ತಕ್ಕ ಉತ್ತರ ನೀಡಿದ್ದಾರೆ’ ಎಂದರು.

ಕಳೆದ ವಾರ ಹಮ್ಮಿಕೊಂಡಿದ್ದ ‘ರಾಷ್ಡ್ರೀಯ ಕೈಮಗ್ಗ ದಿನ’ ಪ್ರಸ್ತಾಪಿಸಿದ ಅವರು, ‘1905ರಲ್ಲಿ ಮಹಾತ್ಮ ಗಾಂಧಿ ಆರಂಭಿಸಿದ ಸ್ವದೇಶಿ ಚಳವಳಿಯಂತೆಯೇ ದೇಶದ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಉತ್ತೇಜನ ನೀಡುವ ಭಾಗವಾಗಿ ಕೈಮಗ್ಗ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಸ್ವದೇಶಿ ಚಳವಳಿಯು ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತ ಅಭಿಯಾನಕ್ಕೂ ಪ್ರೇರಣಾದಾಯಕ’ ಎಂದರು.

ನೇರ ನಗದು ವರ್ಗಾವಣೆ, ಆಯುಷ್ಮಾನ್‌ ಭಾರತ, ಗ್ರಾಮೀಣ ಪ್ರದೇಶಗಳಿಗೆ 4ಜಿ ಮೊಬೈಲ್‌ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ದೇಶ ದಾಖಲಿಸಿದ ಸಾಧನೆಯನ್ನು ವಿವರಿಸಿದರು.

ಮುರ್ಮು ಭಾಷಣದ ಪ್ರಮುಖ ಅಂಶಗಳು

* ವಿವಿಧ ದೇಶಗಳಿಗೆ ಭೇಟಿ ನೀಡಿದ ಸರ್ವಪಕ್ಷಗಳ ಸಂಸದರಿದ್ದ ನಿಯೋಗವು ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಭಾರತದ ನಿಲುವು ಹಾಗೂ ಅದರ ವಿರುದ್ಧ ಕೈಗೊಂಡಿರುವ ಸಾಮೂಹಿಕ ಹೋರಾಟವನ್ನು ಮನವರಿಕೆ ಮಾಡಿಕೊಟ್ಟಿದೆ

* ಭಾರತ ಎಂದಿಗೂ ಆಕ್ರಮಣಕಾರಿ ಆಗುವುದಿಲ್ಲ. ಆದರೆ ದೇಶದ ಜನರು ಹಾಗೂ ಹಿತಾಸಕ್ತಿ ರಕ್ಷಣೆ ವಿಚಾರ ಬಂದಾಗ ಪ್ರತ್ಯುತ್ತರ ನೀಡಲು ಹಿಂಜರಿಯುವುದಿಲ್ಲ ಎಂಬ ನಮ್ಮ ನಿಲುವನ್ನು ಜಾಗತಿಕ ಸಮುದಾಯ ಗಮನಿಸಿದೆ

* ಆಪರೇಷನ್ ಸಿಂಧೂರವು ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯ ಯಶಸ್ಸನ್ನು ಪ್ರದರ್ಶಿಸಿದೆ. ಭಾರತದ ಪ್ರತಿಕ್ರಿಯೆ ಸರಿಯಾಗಿತ್ತು ಎಂಬುದನ್ನು ಈ ಕಾರ್ಯಾಚರಣೆಯ ಯಶಸ್ಸು ಸಾಬೀತುಪಡಿಸಿದೆ

* ಕೃತಕಬುದ್ಧಿ (ಎಐ) ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಈ ಕ್ಷೇತ್ರಕ್ಕೆ ಉತ್ತೇಜನ ನೀಡುವುದಕ್ಕಾಗಿ ‘ಇಂಡಿಯಾ–ಎಐ’ ಕಾರ್ಯಕ್ರಮ ಆರಂಭಿಸಲಾಗಿದೆ. 2047ರ ವೇಳೆಗೆ ಭಾರತವನ್ನು ಜಾಗತಿಕ ಎಐ ಕೇಂದ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಬೇಕಾಗಿದೆ 

* ಉದ್ದೇಶಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮ ಹೊಸ ವಿಶ್ವಾಸ ಮೂಡಿಸಿದೆ * ನಮ್ಮ ಯುವಕರು ಕ್ರೀಡಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ತೋರುತ್ತಿದ್ದಾರೆ. ಚದುರಂಗದಲ್ಲಿ ಹಿಂದೆಂದೂ ತೋರದಂತಹ ಸಾಧನೆ ದಾಖಲಿಸಿದ್ದಾರೆ

‘ಎನ್‌ಇಪಿ: ಕಲಿಕೆ ಜೊತೆ ಮೌಲ್ಯಗಳನ್ನು ಬೆಸೆದಿದೆ’

ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಭವಿಷ್ಯದಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಈ ನೀತಿಯು ಕಲಿಕೆಯೊಂದಿಗೆ ಮೌಲ್ಯಗಳನ್ನು ಪರಂಪರೆಯೊಂದಿಗೆ ಕೌಶಲಗಳನ್ನು ಬೆಸೆದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ‘ತಮ್ಮ ಕನಸುಗಳನ್ನು ಕನಸು ಮಾಡಿಕೊಳ್ಳುವುದಕ್ಕಾಗಿ ನಮ್ಮ ಯುವಕರು ಸರಿಯಾದ ಪರಿಸರವನ್ನು ಕಂಡುಕೊಂಡಿದ್ದಾರೆ. ಉದ್ಯಮಶೀಲತೆ ಆಕಾಂಕ್ಷೆ ಹೊಂದಿದವರಿಗೆ ಉದ್ಯೋಗಾವಕಾಶಗಳು ತೆರೆದುಕೊಂಡಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೂರಕ ಪರಿಸರ ನಿರ್ಮಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.