ADVERTISEMENT

Operation Sindoor ದಾಳಿಗೆ ಬಳಸಿದ ಅಸ್ತ್ರಗಳಿವು...

​ಪ್ರಜಾವಾಣಿ ವಾರ್ತೆ
Published 7 ಮೇ 2025, 20:04 IST
Last Updated 7 ಮೇ 2025, 20:04 IST
<div class="paragraphs"><p>Operation Sindoor</p></div>

Operation Sindoor

   

ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಲು ಭಾರತೀಯ ಸೇನೆಯು 'ಸ್ಕಾಲ್ಪ್‌" ಕ್ಷಿಪಣಿ, 'ಹ್ಯಾಮರ್‌ ಸ್ಮಾರ್ಟ್‌ ಸಶ್ತ್ರಾಸ್ತ್ರ ವ್ಯವಸ್ಥೆ’, ‘ಕಾಮಿಕೇಜ್‌ ಡ್ರೋನ್‌’,  ಗುರಿ ನಿರ್ದೇಶಿತ ಬಾಂಬ್‌ ಕಿಟ್‌ಗಳನ್ನು ಬಳಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ರಫೆಲ್‌ ಯುದ್ಧ ವಿಮಾನಗಳನ್ನು ಬಳಸಿಕೊಂಡು ಸೇನೆ ಈ ದಾಳಿಯನ್ನು ಸಂಘಟಿಸಿದೆ. 

ಸ್ಕಾಲ್ಪ್‌ ಕ್ಷಿಪಣಿ: ‘ಸ್ಟಾರ್ಮ್‌ ಶಾಡೋ’ ಎಂದು ಕರೆಯಲಾಗುವ, ಯುರೋಪಿನ ರಕ್ಷಣಾ ಕಂಪನಿ ಎಂಬಿಡಿಎ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ ನಿಗದಿತ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡುವುದಕ್ಕೆ ಹೆಸರುವಾಸಿ. ಅಂದಾಜು 1,300 ಕೆಜಿ ತೂಗುವ, 5.10 ಮೀಟರ್‌ ಉದ್ದದ ಈ ಕ್ಷಿಪಣಿಯನ್ನು ರಕ್ಷಣಾ ಉದ್ದೇಶದ ಬಂಕರ್‌ಗಳು ಮತ್ತು ಮಹತ್ವದ ಮೂಲಸೌಕರ್ಯಗಳನ್ನು ನಾಶ ಮಾಡಲು ಬಳಸಲಾಗುತ್ತದೆ. 

ADVERTISEMENT

ದೂರ ವ್ಯಾಪ್ತಿಯಲ್ಲಿರುವ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ಯುದ್ಧವಿಮಾನದಲ್ಲಿ ಅಳವಡಿಸಿ, ಗುರಿಯೆಡೆಗೆ ನಿರ್ದೇಶಿಸಲಾಗುತ್ತದೆ. ಇರಾಕ್‌, ಲಿಬಿಯಾ, ಸಿರಿಯಾದಲ್ಲೂ ಯುದ್ಧದ ಸಂದರ್ಭದಲ್ಲಿ ಈ ಕ್ಷಿಪಣಿಯನ್ನು ಬಳಸಲಾಗಿತ್ತು. ಉಕ್ರೇನ್‌ ಕೂಡ ರಷ್ಯಾದ ವಿರುದ್ಧ ‘ಸ್ಕಾಲ್ಪ್‌’ ಅನ್ನು ಬಳಸಿದೆ. 

‘ಹ್ಯಾಮರ್‌’ ವ್ಯವಸ್ಥೆ: ಫ್ರಾನ್ಸ್‌ನ ರಕ್ಷಣಾ ಸಲಕರಣೆಗಳ ತಯಾರಿಕಾ ಸಂಸ್ಥೆ ಸಫ್ರಾನ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಡಿಫೆನ್ಸ್‌ ಅಭಿವೃದ್ಧಿ ಪಡಿಸಿರುವ ನೆಲದಲ್ಲಿರುವ ಗುರಿಯ ಮೇಲೆ ಆಗಸದಿಂದ ದಾಳಿ ನಡೆಸುವ ನಿರ್ದಿಷ್ಟ ಗುರಿ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆ ಇದು. ಸ್ಥಿರವಾದ ಮತ್ತು ಸಂಚರಿಸುವ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ. ಜಿಪಿಎಸ್‌, ಇನ್‌ಫ್ರಾರೆಡ್‌ ಇಮೇಜಿಂಗ್‌, ಲೇಸರ್‌ ಗುರಿ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಈ ಕ್ಷಿಪಣಿ ಬಾಂಬ್‌ ಅನ್ನು ಅನ್ನು ಬಳಸುವುದಕ್ಕೆ ಅವಕಾಶ ಇದೆ.  

ಈ ಎರಡು ಕ್ಷಿಪಣಿ ವ್ಯವಸ್ಥೆಗಳೊಂದಿಗೆ ನಿಗಾ ಮತ್ತು ಗುರಿಯನ್ನು ಗುರುತಿಸುವ ಉದ್ದೇಶಕ್ಕೆ ಬಳಸುವ ಮತ್ತು ‘ಕಾಮಿಕೇಜ್‌ ಡ್ರೋನ್‌’ ಎಂದು ಕರೆಯಲಾಗುವ ಅಸ್ತ್ರವನ್ನೂ ಬಳಸಿದೆ. 1000 ಕಿ.ಮೀ ದೂರದವರೆಗೂ ಸಂಚರಿಸುವ ಸಾಮರ್ಥ್ಯವಿರುವ ಈ ಈ ಡ್ರೋನ್‌ ಅನ್ನು ಡಿಆರ್‌ಡಿಒ ಕೆಲವು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಿದೆ. ಶತ್ರುಗಳ ನೆಲೆಯನ್ನು ಗುರುತಿಸಿ, ನಂತರ ದಾಳಿ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.