ADVERTISEMENT

ರೈತರ ಪ್ರತಿಭಟನೆ ಬಗ್ಗೆ ಚರ್ಚೆಗೆ ಆಗ್ರಹ: ಪ್ರತಿಪಕ್ಷಗಳ ಸದಸ್ಯರ ಸಭಾತ್ಯಾಗ

ಪಿಟಿಐ
Published 2 ಫೆಬ್ರುವರಿ 2021, 6:24 IST
Last Updated 2 ಫೆಬ್ರುವರಿ 2021, 6:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು ಮಂಗಳವಾರ ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು.

ರಾಜ್ಯಸಭೆಯ ಇಂದಿನ ಕಾರ್ಯಕ್ರಮಪಟ್ಟಿಯನ್ನು ರದ್ದುಗೊಳಿಸಿ, ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತಾಗಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಆದರೆ ಸಭಾಧ್ಯಕ್ಷರಾದ ಎಂ.ವೆಂಕಯ್ಯನಾಯ್ಡು ಅವರು ಇದಕ್ಕೆ ಅನುಮತಿ ನೀಡಲಿಲ್ಲ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು ಕಲಾಪದಿಂದ ಹೊರ ನಡೆದರು.

ADVERTISEMENT

267ರ ನಿಯಮದ ಪ್ರಕಾರ ದಿನದ ವ್ಯವಹಾರಗಳನ್ನು ರದ್ದುಗೊಳಿಸಿ, ರೈತರ ಪ್ರತಿಭಟನೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ನೋಟಿಸ್‌ ನೀಡಿದ್ದವು.

‘ನನಗೆ ಹಲವು ವಿರೋಧ ಪಕ್ಷಗಳ ನಾಯಕರಿಂದ ಈ ಸಂಬಂಧ ನೋಟಿಸ್‌ ಸಿಕ್ಕಿದೆ. ಆದರೆ ಸಂಸತ್ತಿನ ಉಭಯ ಸದನಗಳನ್ನುದ್ಧೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಬಹುದು’ ಎಂದು ಸಭಾಧ್ಯಕ್ಷರು ಹೇಳಿದರು.

‘ಲೋಕಸಭೆಯಲ್ಲಿ ನಿಲುವಳಿಯ ಕುರಿತಂತೆ ಮಂಗಳವಾರ ಚರ್ಚೆ ಪ್ರಾರಂಭವಾಗಲಿದೆ. ರಾಜ್ಯಸಭೆಯಲ್ಲಿಬುಧವಾರ ಈ ಸಂಬಂಧ ಚರ್ಚೆ ನಡೆಸಲಿದೆ’ ಎಂದು ಅವರು ಹೇಳಿದರು.

‘ಕೃಷಿ ಕಾಯ್ದೆಗಳ ಕುರಿತಂತೆ ರೈತರು ಮತ್ತು ಸರ್ಕಾರದ ನಡುವೆ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಇದು ಬಹಳ ಮಹತ್ವಪೂರ್ಣ ವಿಷಯ. ಹಾಗಾಗಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಬಹುದು’ ಎಂದು ವೆಂಕಯ್ಯನಾಯ್ಡು ಅವರು ತಿಳಿಸಿದರು. ಪ್ರತಿಪಕ್ಷಗಳ ಸದಸ್ಯರು ಇದನ್ನು ಒಪ್ಪದೆ ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.