ADVERTISEMENT

Maha Kumbh Stampede | ಮಹಾಕುಂಭ ದುರಂತ: ಅಧಿವೇಶನದಲ್ಲಿ ಚರ್ಚೆಗೆ ಆಗ್ರಹ

ಪಿಟಿಐ
Published 30 ಜನವರಿ 2025, 23:30 IST
Last Updated 30 ಜನವರಿ 2025, 23:30 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್‌ ಅಧಿವೇಶನ ಶುಕ್ರವಾರದಿಂದ ಆರಂಭವಾಗುತ್ತಿದ್ದು, ಮಹಾಕುಂಭ ದುರಂತ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿನ ಕಾಲ್ತುಳಿತದ ಬಗ್ಗೆ ವ್ಯಾಪಕ ಚರ್ಚೆ ನಡೆಸುವಂತೆ ಆಗ್ರಹಿಸಿರುವ ಪ್ರತಿಪಕ್ಷಗಳು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಯೋಜಿಸಿವೆ.

ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಮೊದಲ ದಿನ ಭಾಷಣ ಮಾಡಲಿದ್ದು, ಶನಿವಾರ ಬಜೆಟ್‌ ಮಂಡನೆ ಆಗಲಿದೆ. ಆ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ADVERTISEMENT

16 ಮಸೂದೆ ಮಂಡನೆಗೆ ಯೋಜನೆ:

ಕೇಂದ್ರ ಸರ್ಕಾರವು ಒಟ್ಟು 16 ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ಯೋಜಿಸಿದೆ. ಅವುಗಳಲ್ಲಿ ವಿವಾವಾದಾತ್ಮಕ ವಕ್ಫ್‌ (ತಿದ್ದುಪಡಿ) ಮಸೂದೆ– 2024, ವಲಸೆ ಮತ್ತು ವಿದೇಶಿಯರ ಮಸೂದೆ– 2025 ಸಹ ಸೇರಿದೆ. ಈ ಉದ್ದೇಶಿತ ಮಸೂದೆಗಳು ಸಾಮೂಹಿಕ ಗೊಂದಲ ಮೂಡಿಸುವ ಅಸ್ತ್ರಗಳಾಗಿವೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಬಳಿಕ ಅಧಿವೇಶನದ ಮೊದಲ ಹಂತವು ಫೆಬ್ರುವರಿ 13ರಂದು ಕೊನೆಗೊಳ್ಳಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್‌ 10ರಿಂದ ಏಪ್ರಿಲ್‌ 4ರವರೆಗೆ ನಡೆಯಲಿದ್ದು, ಬಜೆಟ್‌ ಹಂಚಿಕೆ ಕುರಿತ ಚರ್ಚೆಗಳು ನಡೆಯಲಿವೆ.

ಸರ್ವ ಪಕ್ಷ ಸಭೆ:

ಅಧಿವೇಶನ ಆರಂಭದ ಹಿಂದಿನ ದಿನವಾದ ಗುರುವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು, ಮಹಾಕುಂಭ ದುರಂತ, ಒಕ್ಕೂಟ ವ್ಯವಸ್ಥೆ, ವಿವಾದಾತ್ಮಕ ಯುಜಿಸಿ ಕರಡು ಮಾರ್ಗಸೂಚಿ, ಸಂಸತ್ತಿನ ಪರಿಕರಗಳನ್ನು ಬಳಸಲು ಸಂಸದರಿಗೆ ಇರುವ ಅವಕಾಶಗಳು ಕ್ರಮೇಣ ಕಡಿಮೆ ಆಗಿರುವ ಕುರಿತು ಹಾಗೂ ವಕ್ಫ್‌ (ತಿದ್ದುಪಡಿ) ಮಸೂದೆ ಬಗ್ಗೆಗಿನ ಸಂಸದೀಯ ಸಮಿತಿಯ ಕಾರ್ಯ ನಿರ್ವಹಣೆ ಕುರಿತ ದೂರುಗಳ ಬಗ್ಗೆ ಚರ್ಚೆಗೆ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. 

‘ನಾಯಕರು ಕೆಲವು ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಯಾವ ವಿಷಯವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಲಾಪ ಸಲಹಾ ಸಮಿತಿ (ಬಿಎಸಿ) ನಿರ್ಧರಿಸಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ವಿಐಪಿ ಸಂಸ್ಕೃತಿ ಬಗ್ಗೆ ತರಾಟೆ:

ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ವಿರೋಧ ಪಕ್ಷಗಳ ಹಲವು ನಾಯಕರು ಸರ್ವ ಪಕ್ಷಗಳ ಸಭೆಯಲ್ಲಿ ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದರು. ‘ಆಡಳಿತದಲ್ಲಿ ಇರುವವರಿಗೆ ವಿಐಪಿಗಳೇ ಮುಖ್ಯವಾಗಿದ್ದು, ಅವರಿಗೇ ಆದ್ಯತೆ ನೀಡುತ್ತಿದ್ದಾರೆ ಮತ್ತು ಸಾಮಾನ್ಯ ಯಾತ್ರಿಕರನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಸಮಾಜವಾದಿ ಪಕ್ಷದ ರಾಮಗೋಪಾಲ್‌ ಯಾದವ್‌ ದೂರಿದರು.

ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ, ಎಲ್‌ಜೆಪಿ (ರಾಮ್‌ವಿಲಾಸ್‌) ನಾಯಕರು ಚರ್ಚೆಯ ಸಮಯದಲ್ಲಿ ತಮ್ಮ ಸಂಸದರಿಗೆ ಹೆಚ್ಚಿನ ಸಮಯ ಒದಗಿಸಬೇಕು ಎಂದು ಒತ್ತಾಯಿಸಿದರು ಎಂಬುದಾಗಿ ಮೂಲಗಳು ತಿಳಿಸಿವೆ.

‘ಸರ್ಕಾರವು ಒಂದು ದೇಶ, ಒಂದು ಚುನಾವಣೆ ಮಸೂದೆಗಳ ವಿಷಯದಲ್ಲಿ ಆತುರಪಡಬಾರದು. ಅದನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು’ ಎಂದು ಜೆಡಿಯು ಸದಸ್ಯ ಸಂಜಯ್‌ ಝಾ ಆಗ್ರಹಿಸಿದರು.

ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ

ನವದೆಹಲಿ (ಪಿಟಿಐ): ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನ್ನ ವರದಿಯನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಗುರುವಾರ ಸಲ್ಲಿಸಿತು. ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್‌ ಅವರು ವರದಿಯಲ್ಲಿ ಹಸ್ತಾಂತರಿಸಿದರು. ಜೆಪಿಸಿ 15-11 ಬಹುಮತದಿಂದ ಕರಡು ಶಾಸನದ ವರದಿಯನ್ನು ಬುಧವಾರ ಅಂಗೀಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.