ADVERTISEMENT

ಬಂದೂಕು, ಗುಂಡುಗಳಿಂದ ರಾಜ್ಯ ಆಳುತ್ತಿರುವ ನಿತೀಶ್‌: ವಿರೋಧ ಪಕ್ಷದ ಸದಸ್ಯರ ಆರೋಪ

ಪಿಟಿಐ
Published 24 ಫೆಬ್ರುವರಿ 2026, 14:20 IST
Last Updated 24 ಫೆಬ್ರುವರಿ 2026, 14:20 IST
<div class="paragraphs"><p>ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು&nbsp;ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆಗೆ ಆಗಮಿಸಿದ ಕ್ಷಣ </p></div>

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆಗೆ ಆಗಮಿಸಿದ ಕ್ಷಣ

   

–ಪಿಟಿಐ ಚಿತ್ರ

ಪಟ್ನಾ: ‘ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಬಂದೂಕು ಮತ್ತು ಗುಂಡುಗಳ ಸಹಾಯದಿಂದ ರಾಜ್ಯವನ್ನು ಆಳುತ್ತಿದೆ’ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರ ಗದ್ದಲ ಎಬ್ಬಿಸಿದರು.

ADVERTISEMENT

ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾದ ಕೂಡಲೇ ಗದ್ದಲ ಆರಂಭವಾಯಿತು. ಗ್ರಾಮದ ಚೌಕಿದಾರರ (ಕಾವಲುಗಾರರು) ಮೇಲಿನ ಲಾಠಿ ಪ್ರಹಾರವನ್ನು ವಿರೋಧಿಸಿ ಆರ್‌ಜೆಡಿ ಶಾಸಕ ಕುಮಾರ್‌ ಸರ್ವಜೀತ್‌ ಅವರು ಪ್ರತಿಭಟಿಸಿದರು.

‘ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಚೌಕಿದಾರರು ಗೃಹ ಇಲಾಖೆಯ ನೌಕರರು ಎಂಬುದನ್ನೂ ನೋಡದೆ, ಲಾಠಿ ಪ್ರಹಾರ ನಡೆಸುವ ಮೂಲಕ ಶೋಚನೀಯ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.

ವಿರೋಧ ಪಕ್ಷದ ಇತರ ಶಾಸಕರು ತಮ್ಮ ಆಸನಗಳಿಂದ ಎದ್ದು ನಿಂತು, ‘ಬಂದೂಕು ಮತ್ತು ಗುಂಡುಗಳ ಸಹಾಯದಿಂದ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಘೋಷಣೆ ಕೂಗಿದರು.

ಇದರಿಂದ ಕೆರಳಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ಅಸಭ್ಯವಾಗಿ ಮಾತನಾಡಬೇಡಿ. ಈ ಸರ್ಕಾರ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ. ನಿಮ್ಮಲ್ಲಿ ಎಷ್ಟು ಮಂದಿ ಈಗ ಉಳಿದಿದ್ದಾರೆಂದು ನೋಡಿ’ ಎಂದು ತಿರುಗೇಟು ನೀಡಿದರು.

‘ನೀವು ಅಧಿಕಾರದಲ್ಲಿದ್ದಾಗ ಯಾವುದೇ ಪ್ರಯೋಜನಕಾರಿ ಕೆಲಸ ಮಾಡಲಿಲ್ಲ’ ಎಂದೂ ಆರೋಪಿಸಿದರು.

ಈ ಗದ್ದಲದ ನಡುವೆಯೇ, ವಿರೋಧ ಪಕ್ಷದ ಕೆಲ ಶಾಸಕರು ಸಭಾಧ್ಯಕ್ಷರ ಪೀಠದ ಎದುರಿಗೆ ತೆರಳಿ ಘೋಷಣೆ ಕೂಗಿದರು. ಈ ವೇಳೆ, ಗದ್ದಲದ ವಾತಾವರಣ ಸೃಷ್ಟಿಯಾಯಿತು. 

‘ಚೌಕೀದಾರರ ವಿವಿಧ ಸಂಘಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು’ ಎಂದು ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಕುಮಾರ್‌ ಚೌಧರಿ ಭರವಸೆ ನೀಡಿದ ಬಳಿಕ ವಿರೋಧ ಪಕ್ಷದ ಸದಸ್ಯರು ಶಾಂತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.