ADVERTISEMENT

ಪರಿವಾರದೊಂದಿಗೆ, ಪರಿವಾರದ ವಿಕಾಸಕ್ಕಾಗಿ: ವಿಪಕ್ಷಗಳ ವಿರುದ್ಧ PM ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 10:19 IST
Last Updated 11 ಏಪ್ರಿಲ್ 2025, 10:19 IST
<div class="paragraphs"><p>ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು</p></div>

ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು

   

ಪಿಟಿಐ ಚಿತ್ರ

ವಾರಾಣಸಿ: ‘ಅಧಿಕಾರಕ್ಕಾಗಿ ಹಾತೊರೆಯುವವರು ತಮ್ಮ ಕುಟುಂಬದ ಉದ್ದಾರವನ್ನು ಮಾತ್ರ ಬಯಸುತ್ತಾರೆ. ಆದರೆ ನಮ್ಮ ಸರ್ಕಾರವು ಸಮಗ್ರ ಅಭಿವೃದ್ಧಿಯ ಮಂತ್ರದೊಂದಿಗೆ ಕಲಸ ಮಾಡುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ₹3,880 ಕೋಟಿ ಮೊತ್ತದ 44 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಶುಕ್ರವಾರ ಮಾತನಾಡಿದ ಅವರು, ‘ಎಲ್ಲರೊಂದಿಗೂ, ಎಲ್ಲರ ವಿಕಾಸ ಎಂಬುದು ದೇಶಕ್ಕಾಗಿ ದುಡಿಯುವ ನಮ್ಮ ಮಂತ್ರವಾಗಿದೆ. ಇದೇ ಧ್ಯೇಯೋದ್ದೇಶದೊಂದಿಗೆ ದೇಶದ ಪ್ರತಿಯೊಬ್ಬ ನಾಗರಿಕರ ಕಲ್ಯಾಣಕ್ಕಾಗಿ ನಾವು ಮುನ್ನುಗ್ಗುತ್ತಿದ್ದೇವೆ’ ಎಂದಿದ್ದಾರೆ.

‘ಯಾರಿಗೆಲ್ಲಾ ಅಧಿಕಾರದ ದಾಹ ಇದೆಯೋ ಅವರೆಲ್ಲರೂ ಹಗಲಿರುಳು ರಾಜಕೀಯವನ್ನೇ ಮಾಡುತ್ತಾರೆ. ಆದರೆ ಅವು ಯಾವುವೂ ರಾಷ್ಟ್ರದ ಹಿತಕ್ಕಾಗಿಯಲ್ಲ, ಬದಲಾಗಿ ಕುಟುಂಬವನ್ನು ಮುಂದಕ್ಕೆ ತರಲು ಹಾಗೂ ಕುಟುಂಬದ ಅಭಿವೃದ್ಧಿ ಕೇಂದ್ರಿತವಾಗಿ ಆಲೋಚಿಸುತ್ತಾರೆ. ಪರಿವಾರದೊಂದಿಗೆ, ಪರಿವಾರದ ವಿಕಾಸಕ್ಕಾಗಿ ಎಂಬುದಷ್ಟೇ ಇವರ ಮಂತ್ರವಾಗಿದೆ’ ಎಂದು ಮೋದಿ ಆರೋಪಿಸಿದ್ದಾರೆ.

ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದ ನಂತರ ಭೋಜಪುರಿ ಭಾಷೆಯಲ್ಲಿ ಜನರಿಗೆ ಅಭಿನಂದನೆ ಸಲ್ಲಿಸಿದರು. 

‘ಪೂರ್ವಾಂಚಲವು ಹಿಂದೊಮ್ಮೆ ಆರೋಗ್ಯ ಸೌಲಭ್ಯ ವಂಚಿತ ಪ್ರದೇಶವಾಗಿತ್ತು. ಆದರೆ ಇಂದು ಕಾಶಿ ಕ್ಷೇತ್ರವು ಆರೋಗ್ಯ ರಾಜಧಾನಿಯಾಗಿ ಅಭಿವೃದ್ಧಿ ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಬನಾರಸ್‌ ಹೊಸ ಸ್ವರೂಪ ಪಡೆದುಕೊಂಡಿದೆ. ತನ್ನ ಪರಂಪರೆಯನ್ನು ಕಾಪಿಟ್ಟುಕೊಂಡಿರುವುದರ ಜತೆಗೆ, ಉಜ್ವಲ ಭವಿಷ್ಯದೆಡೆಗೆ ಕಾಶಿಯು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಹೀಗಾಗಿ ಪೂರ್ವಾಂಚಲದ ಅಭಿವೃದ್ಧಿಯ ರಥವನ್ನು ಕಾಶಿ ಮುಂದಕ್ಕೆ ಎಳೆಯುತ್ತಿದೆ’ ಎಂದಿದ್ದಾರೆ.

‘ದೇಶದ ಏಕತೆಯನ್ನು ಇನ್ನಷ್ಟು ಸದೃಢಗೊಳಿಸಲು ಕಾಶಿ ತಮಿಳ್‌ ಸಂಗಮ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉತ್ತರ ಪ್ರದೇಶವು ತನ್ನ ಕಾರ್ಯವಿಧಾನವನ್ನು ಬದಲಿಸಿಕೊಂಡಿದ್ದು, ಆರ್ಥಿಕವಾಗಿ ಪ್ರಗತಿ ಕಾಣುತ್ತಿದೆ. ಜಿಐ ಟ್ಯಾಗ್ ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶವು ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ವಾರಾಣಸಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಜಿಐ ಟ್ಯಾಗ್ ಹೊಂದಿವೆ. ಇದರಲ್ಲಿ ತಬಲಾ, ಶೆಹನಾಯಿ, ಗೋಡೆ ಚಿತ್ರಗಳ, ಸಿಹಿ ತಿನಿಸುಗಳು, ಕೆಂಪು ಪೇಢಾ ಮತ್ತು ಬರ್ಫಿ ಸೇರಿವೆ’ ಎಂದು ಮೋದಿ ವಿವರಿಸಿದ್ದಾರೆ.

‘2036 ಒಲಿಂಪಿಕ್ಸ್‌ ಭಾರತದಲ್ಲಿ ನಡೆಯುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಕಾಶಿಯ ಯುವ ಸಮುದಾಯಕ್ಕೆ ಬಹಳಷ್ಟು ಅವಕಾಶಗಳು ಭವಿಷ್ಯದಲ್ಲಿ ಸಿಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.