ADVERTISEMENT

ಸಿಜೆಐ ವಿರುದ್ಧ ಟ್ರೋಲ್: ಕ್ರಮಕ್ಕೆ ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 16:25 IST
Last Updated 17 ಮಾರ್ಚ್ 2023, 16:25 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ (ಪಿಟಿಐ): ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಹೊಸ ಸರ್ಕಾರ ರಚನೆ ಸಂದರ್ಭದಲ್ಲಿ ರಾಜ್ಯಪಾಲರ ಪಾತ್ರ ಕುರಿತ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನು ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಲವು ಸಂಸದರು ರಾಷ್ಟ್ರಪತಿಗೆ ಕೋರಿದ್ದಾರೆ.

ವಿರೋಧ ಪಕ್ಷಗಳ ಹಲವು ಸಂಸದರು ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದ್ದಾರೆ. ‘ಟ್ರೋಲ್‌ ಮಾಡುವ ಪ್ರವೃತ್ತಿಯು ನ್ಯಾಯದ ಹಾದಿಯಲ್ಲಿ ಹಸ್ತಕ್ಷೇಪ ಮಾಡುವ ನಾಚಿಕೆಗೇಡಿನ ಪ್ರಕರಣ’ ಎಂದು ಹೇಳಿದ್ದಾರೆ. ‘ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದು, ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್, ಪ್ರಮೋದ್ ತಿವಾರಿ, ಶಕ್ತಿಸಿನ್ಹ ಗೋಹಿಲ್, ಅಖಿಲೇಶ್ ಪ್ರಸಾದ್ ಸಿಂಗ್, ಅಮೀ ಯಾಜ್ನಿಕ್, ರಂಜಿತ್‌ ರಂಜನ್, ಇಮ್ರಾನ್ ಪ್ರತಾಪ್‌ ಗರ್ಹಿ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಎಎಪಿಯ ರಾಘವ್‌ ರಾಮ್‌, ಎಸ್‌ಪಿಯ ರಾಮ್‌ ಗೋಪಾಲ್‌ ಯಾದವ್ ಮತ್ತು ಜಯಾಬಚ್ಚನ್‌ ಸೇರಿದಂತೆ ಹಲವು ಸಂಸದರು ಬೆಂಬಲಿಸಿದ್ದಾರೆ.

ADVERTISEMENT

ದೂರಿನ ಪ್ರತಿಯನ್ನು ಕಾನೂನು ಸಚಿವರು, ಐಟಿ ಸಚಿವರು ಮತ್ತು ದೆಹಲಿಯ ಪೊಲೀಸ್ ಆಯುಕ್ತರಿಗೂ ಕಳುಹಿಸಲಾಗಿದೆ. ಅಟಾರ್ನಿ ಜನರಲ್‌ಗೂ ಪ್ರತಿ ಕಳುಹಿಸಿದ್ದು, ಟ್ರೋಲಿಂಗ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಂಖಾ ಒತ್ತಾಯಿಸಿದ್ದಾರೆ.

ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮತ್ತು ರಾಜ್ಯಪಾಲರ ಪಾತ್ರ ಕುರಿತು ವಿಚಾರಣೆ ನಡೆಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.