ADVERTISEMENT

ಫಾರೂಕ್ ಅಬ್ದುಲ್ಲಾ ಅಕ್ರಮ ಬಂಧನ: ಪ್ರತಿಪಕ್ಷಗಳ ವಿರೋಧ

ಲೋಕಸಭೆ: ಸದನ ಬಹಿಷ್ಕರಿಸಿ ಹೊರನಡೆದ ಪ್ರತಿಪಕ್ಷಗಳ ನಾಯಕರು

ಪಿಟಿಐ
Published 5 ಫೆಬ್ರುವರಿ 2020, 18:30 IST
Last Updated 5 ಫೆಬ್ರುವರಿ 2020, 18:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಸಂಸದ ಫಾರೂಕ್ ಅಬ್ದುಲ್ಲಾ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿಡಲಾಗಿದೆ’ ಎಂದು ಆರೋಪಿಸಿದ ಪ್ರತಿಪಕ್ಷಗಳ ನಾಯಕರು ಬುಧವಾರ ಲೋಕಸಭೆಯಲ್ಲಿ ಗದ್ದಲ ನಡೆಸಿ, ಸದನ ಬಹಿಷ್ಕರಿಸಿ ಹೊರನಡೆದರು.

ಕೇಂದ್ರ ಸರ್ಕಾರ ಆಗಸ್ಟ್ 5ರಂದುಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿತ್ತು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಫಾರೂಕ್ ಅಬ್ದುಲ್ಲಾ ಸೇರಿದಂತೆ ಅನೇಕ ನಾಯಕರನ್ನು ಬಂಧಿಸಲಾಗಿತ್ತು.

‘ಫಾರೂಕ್ ಅಬ್ದುಲ್ಲಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಯಾವುದೇ ಕಾರಣ ನೀಡದೇ ಆರು ತಿಂಗಳಿನಿಂದ ಅಕ್ರಮವಾಗಿ ಜೈಲಿನಲ್ಲಿರಿಸಲಾಗಿದೆ. ಎಲ್ಲರನ್ನೂ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದರು.

ADVERTISEMENT

ಬಳಿಕ ಪ್ರತಿಪಕ್ಷಗಳ ನಾಯಕರು ಸದನವನ್ನು ಬಹಿಷ್ಕರಿಸಿ ಸದನಲ್ಲಿ ಹೊರನಡೆದರು.

ಅಬ್ದುಲ್ಲಾ ಬಂಧನ ಕುರಿತು ಮಾತನಾಡಿದ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ, ಸರ್ವ ಪಕ್ಷಗಳ ಸಭೆಯಲ್ಲೂ ಈ ವಿಷಯ ಚರ್ಚಿಸಲಾಗಿದೆ ಎಂದರು. ‘ಕೇಂದ್ರ ಸರ್ಕಾರ, ಕನಿಷ್ಠ ಅಬ್ದುಲ್ಲಾ ಅವರ ಆರೋಗ್ಯದ ಸ್ಥಿತಿಯ ಬಗ್ಗೆಯಾದರೂ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸಂಸದ ಕೆ. ಸುರೇಶ್, ‘ಅಬ್ದುಲ್ಲಾ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಖಾತ್ರಿ ಪಡಿಸುವುದು ಸರ್ಕಾರ ಮತ್ತು ಸದನದ ಜವಾಬ್ದಾರಿಯಾಗಿದೆ’ ಎಂದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಕಳವಳ: ಫಾರೂಕ್ ಅಬ್ದುಲ್ಲಾ ಬಂಧನ ಕುರಿತು ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿದವು.ಎನ್‌ಸಿಪಿ, ಡಿಎಂಕೆ, ಟಿಡಿಪಿ ಮತ್ತು ಆರ್‌ಜೆಡಿ ಸಂಸದರು ಬಂಧನದ ಹಿಂದಿರುವ ಉದ್ದೇಶವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

ಜಮ್ಮು ಮತ್ತು ಕಾಶ್ಮೀರ: ಇಬ್ಬರು ನಾಯಕರ ಬಿಡುಗಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೋನ್, ಪಿಡಿಪಿ ನಾಯಕ ವಹೀದ್ ಪರ‍್ರಾ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಆಪ್ತ ಸಹಾಯಕನನ್ನು ಬುಧವಾರ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋನ್ ಮತ್ತು ಪರ‍್ರಾ ಅವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ 180 ದಿನಗಳ ಹಿಂದೆ ಬಂಧಿಸಲಾಗಿತ್ತು.ಲೋನ್ ಮತ್ತು ಪರ‍್ರಾ ಬಿಡುಗಡೆಯ ನಂತರ 13 ರಾಜಕೀಯ ನಾಯಕರನ್ನು ಎಂಎಲ್‌ಎ ಹಾಸ್ಟೆಲ್‌ನಲ್ಲಿ ಇನ್ನೂ ಬಂಧನದಲ್ಲಿರಿಸಲಾಗಿದೆ. ಹಾಸ್ಟೆಲ್ ಅನ್ನು ತಾತ್ಕಾಲಿಕವಾಗಿ ಜೈಲಾಗಿ ಪರಿವರ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.