ADVERTISEMENT

ಸಂಸತ್ತಿನ ಬಜೆಟ್‌ ಅಧಿವೇಶನ: ರಾಷ್ಟ್ರಪತಿ ಭಾಷಣ ವಿಪಕ್ಷ ಬಹಿಷ್ಕಾರ

ಸಂಸತ್ತಿನ ಬಜೆಟ್‌ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:58 IST
Last Updated 28 ಜನವರಿ 2021, 17:58 IST
ಜೈರಾಂ ರಮೇಶ್‌, ಚಿದಂಬರಂ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು
ಜೈರಾಂ ರಮೇಶ್‌, ಚಿದಂಬರಂ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು   

ನವದೆಹಲಿ (ಪಿಟಿಐ): ಸಂಸತ್ತಿನ ಬಜೆಟ್‌ ಅಧಿವೇಶನವು ಶುಕ್ರವಾರ ಆರಂಭವಾಗಲಿದೆ. ಈ ಬಾರಿ ಅಧಿವೇಶನವು ಹೆಚ್ಚು ಸಂಘರ್ಷಭರಿತವಾಗಿರುವ ಸಾಧ್ಯತೆಯೇ ಹೆಚ್ಚು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ವಿವಾದಾತ್ಮಕ ಕಾಯ್ದೆಗಳು, ಅದರ ವಿರುದ್ಧ ರೈತರು ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಸುತ್ತಿರುವ ಪ್ರತಿಭಟನೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿನ ಹಿಂಸಾಚಾರಗಳೆಲ್ಲವೂ ಸಂಸತ್ತಿನಲ್ಲಿ ಪ್ರತಿಫಲಿಸಬಹುದು.

ರಾಷ್ಟ್ರಪತಿಯವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣವನ್ನೇ ಬಹಿಷ್ಕರಿಸಲು 18 ವಿರೋಧ ಪಕ್ಷಗಳು ನಿರ್ಧರಿಸುವ ಮೂಲಕ ಅಧಿವೇಶನ ಸುಲಲಿತವಲ್ಲ ಎಂಬ ಸೂಚನೆ ನೀಡಿವೆ.

ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನಾ, ಟಿಎಂಸಿ ಸೇರಿ16 ವಿರೋಧ ಪಕ್ಷಗಳು ನಿರ್ಧರಿಸಿವೆ.ಭಾಷಣವನ್ನು ಬಹಿಷ್ಕರಿಸುವುದಾಗಿ ಆಮ್‌ ಅದ್ಮಿ ಪಕ್ಷವು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರದ ಆಡಳಿತಾರೂಢ ಮೈತ್ರಿಕೂಟ ಎನ್‌ಡಿಎಯ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳ ಕೂಡ ಇಂತಹುದೇ ನಿರ್ಧಾರ ಕೈಗೊಂಡಿದೆ. ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಈ ಕ್ರಮ ಎಂದು ವಿರೋಧ ಪಕ್ಷಗಳು ಹೇಳಿವೆ.

ADVERTISEMENT

ಗಣರಾಜ್ಯೋತ್ಸವ ದಿನ ರೈತರು ನಡೆಸಿದ ಟ್ರ್ಯಾಕ್ಟರ್ ರ್‍ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಸರ್ಕಾರದ ಪಾತ್ರದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದೂ ಈ ಪಕ್ಷಗಳು ಒತ್ತಾಯಿಸಿವೆ. ವಿವಾದಾತ್ಮಕವಾದ ಮೂರು ಕೃಷಿ ಕಾಯ್ದೆಗಳನ್ನು
ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿವೆ.

ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸಂವೇದನಾರಹಿತವಾಗಿ ವರ್ತಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಬಜೆಟ್‌ ಭ್ರಮೆ: ಕಾಂಗ್ರೆಸ್‌

‘ದೇಶದ ಅರ್ಥ ವ್ಯವಸ್ಥೆಯು ಸಂಕಷ್ಟದಲ್ಲಿದೆ. ಅದರಿಂದ ಚೇತರಿಸಿಕೊಳ್ಳುವುದು ತ್ರಾಸದಾಯಕ’ ಎಂದು ಕೇಂದ್ರದ ಬಜೆಟ್‌ ಅಧಿವೇಶನದ ಮುನ್ನಾ ದಿನ ಕಾಂಗ್ರೆಸ್‌ ಪಕ್ಷವು ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020–2021ನೇ ಸಾಲಿನ ಪರಿಷ್ಕೃತ ಅಂದಾಜನ್ನೇ ಸುಂದರಗೊಳಿಸಿ ಮಂಡಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರಾದ ಪಿ. ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಂ ರಮೇಶ್‌ ಹೇಳಿದ್ದಾರೆ. 2020–21ರ ಪರಿಷ್ಕೃತ ಅಂದಾಜೇ ಸುಳ್ಳು ಸಂಖ್ಯೆಗಳ ಕಂತೆ. ಹಾಗಾಗಿ, 2021–22ರ ಬಜೆಟ್‌ ಜಾದೂಗಾರ ಸೃಷ್ಟಿಸುವ ಭ್ರಮೆ ಅಷ್ಟೇ ಆಗಿರುತ್ತದೆ ಎಂದು ಚಿದಂಬರಂ ಹೇಳಿದ್ದಾರೆ. 2021–22ರಲ್ಲಿ ಭಾರತದ ಪ್ರಗತಿಯು ಎರಡಂಕಿಯಷ್ಟು ಆಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್‌) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ ಅವರು ಹೇಳಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಭ್ರಮಿಸುತ್ತಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಎರಡಂಕಿ ಪ್ರಗತಿಯ ಬಗ್ಗೆ ಸಂಭ್ರಮಿಸುವ ಮೊದಲು ಈಗಾಗಲೇ ಎರಡಂಕಿಯಷ್ಟು ನಾವು ಹಿಂದಕ್ಕೆ ಹೋಗಿದ್ದೇವೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ’ ಎಂದರು. ಕೋವಿಡ್‌ಪೂರ್ವದ ಸ್ಥಿತಿಗೆ ಭಾರತವು 2025ರ ಮೊದಲು ತಲುಪಲು ಸಾಧ್ಯವಿಲ್ಲ ಎಂಬುದನ್ನೂ ಐಎಂಎಫ್‌ ಹೇಳಿದೆ ಎಂಬುದನ್ನೂ ಅವರು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.