ADVERTISEMENT

ಅಸ್ಸಾಂ ವಿಧಾನಸಭೆ: ವಿರೋಧ ಪಕ್ಷದ ನಾಯಕರಿಂದ ಸಭಾತ್ಯಾಗ

ಪಿಟಿಐ
Published 9 ಆಗಸ್ಟ್ 2021, 10:31 IST
Last Updated 9 ಆಗಸ್ಟ್ 2021, 10:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಮೇಘಾಲಯವು ಅತಿಕ್ರಮಣ ನಡೆಸಿರುವ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್‌ ತಿರಸ್ಕರಿಸಿದರು. ಈ ಕಾರಣ ವಿರೋಧ ಪಕ್ಷದ ನಾಯಕರು ಸೋಮವಾರ ಸದನದಿಂದ ಹೊರ ನಡೆದರು.

ಅಸ್ಸಾಂ–ಮಿಜೋರಾಂ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ನಿಯೋಗವು ಸಲ್ಲಿಸಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಸರ್ಕಾರ ನಿರಾಕರಿಸಿದೆ. ಈ ಬಗ್ಗೆಯೂ ವಿರೋಧ ಪಕ್ಷಗಳು ಸದನದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದವು.

‘ಅಲ್ಲದೆ ಅಸ್ಸಾಂ ಮುಖ್ಯಮಂತ್ರಿ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮೇಘಾಲಯದ ಮುಖ್ಯಮಂತ್ರಿ ಅವರೊಂದಿಗೆ ನಡೆಸಿದ ಚರ್ಚೆ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡುತ್ತಿಲ್ಲ’ ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಾಂಗ್ರೆಸ್‌ ಶಾಸಕ ನೂರುಲ್ ಹುದಾ ಅವರು ಪ್ರಶ್ನೋತ್ತರ ಅವಧಿಯ ಕೊನೆಯಲ್ಲಿ ಮೇಘಾಲಯದ ಅತಿಕ್ರಮಣಕ್ಕೆ ಸಂಬಂಧಿಸಿದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ನಿಲುವಳಿಯನ್ನು ಮಂಡಿಸಿದರು.

‘ಮೇಘಾಲಯವು ಅಸ್ಸಾಂನ ಗುವಾಹಟಿಯ ಖಾನಾಪರ ಪ್ರದೇಶದಲ್ಲಿ ಡ್ರೋನ್ ಬಳಸಿ ಗಡಿ ಸಮೀಕ್ಷೆ ನಡೆಸುತ್ತಿದೆ ಎಂಬುದಾಗಿ ಹಲವು ಪತ್ರಿಕಗೆಳು ವರದಿ ಮಾಡಿವೆ’ ಎಂದು ಅವರು ಸದನಕ್ಕೆ ತಿಳಿಸಿದರು.

ಆದರೆ ಸ್ಪೀಕರ್ ಬಿಸ್ವಜಿತ್‌ ದೈಮರಿ ಅವರು ನೂರುಲ್‌ ಹುದಾ ಅವರಿಗೆ ನಿಲುವಳಿ ಮಂಡಿಸಲು ಅವಕಾಶ ನೀಡಲು ನಿರಾಕರಿಸಿದರು.

‘ಕಮರುಪ್‌ನ ಮಹಾನಗರ ಪಾಲಿಕೆಯ ಅಧಿಕಾರಿಗಳ ಅನುಮತಿಯೊಂದಿಗೆ ಮೇಘಾಲಯವು ಸಮೀಕ್ಷೆ ನಡೆಸಿದೆ. ಅಸ್ಸಾಂ ಕೂಡ ಇದೇ ರೀತಿಯ ಸಮೀಕ್ಷೆ ನಡೆಸಲಿದೆ. ಈ ಸಮೀಕ್ಷೆಯಿಂದ ಯಾವುದೇ ಅತಿಕ್ರಮಣ ನಡೆದಿಲ್ಲ ಎಂಬ ವಿಶ್ವಾಸ ನನಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿಜುಶ್ ಹಜಾರಿಕಾ ಸದನಕ್ಕೆ ತಿಳಿಸಿದ್ದಾರೆ.

ಈ ಬಳಿಕ ಸ್ಪೀಕರ್‌ ಅವರು ವಿರೋಧ ಪಕ್ಷದ ನಾಯಕರನ್ನು ಸದನದಲ್ಲಿ ಇರಬೇಕುಎಂದು ಮನವಿ ಮಾಡಿದರು. ಆದರೂ ಕಾಂಗ್ರೆಸ್‌, ಎಐಯುಡಿಎಫ್‌, ಸಿಪಿಐ(ಎಂ)ನ ನಾಯಕರು ಮತ್ತು ಸ್ವತಂತ್ರ ಶಾಸಕರೊಬ್ಬರು ಸದನದಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.