ADVERTISEMENT

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ‘ಸುಪ್ರೀಂಗೆ’ಪ್ರಮಾಣಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 12:33 IST
Last Updated 21 ಜೂನ್ 2021, 12:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 12ನೇ ತರಗತಿಗೆ ಅನ್ವಯಿಸಿ ಸಿಬಿಎಸ್ಇಯ ಫಲಿತಾಂಶ, ಮೌಲ್ಯಮಾಪನ ಮಾನದಂಡ ಕುರಿತಂತೆ ಸಮಾಧಾನವಿಲ್ಲದ ವಿದ್ಯಾರ್ಥಿಗಳಿಗಾಗಿ, ಪ್ರಮುಖ ವಿಷಯಗಳಿಗೆ ಪರೀಕ್ಷೆಯನ್ನು ಆಗಸ್ಟ್‌ 15 ಮತ್ತು ಸೆಪ್ಟೆಂಬರ್ 15, 2021ರ ನಡುವೆ ನಡೆಸಲಾಗುವುದು ಎಂದು ಸಿಬಿಎಸ್‌ಇ ಸೋಮವಾರ ತಿಳಿಸಿದೆ.

‘ಕೋವಿಡ್‌ ಪಿಡುಗು ಕುರಿತ ಪರಿಸ್ಥಿತಿಯನ್ನು ಆಧರಿಸಿ ಈ ಅವಧಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು’ ಎಂದು ಸಿಬಿಎಸ್‌ಇ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಅಂತೆಯೇ, ಖಾಸಗಿ, ಪತ್ರಾಚಾರ್ ಮತ್ತು ಕಂಪಾರ್ಟ್‌ಮೆಂಟ್‌ ಪರೀಕ್ಷೆಗಳು ಇದೇ ಅವಧಿಯಲ್ಲಿ ನಡೆಯಲಿವೆ ಎಂದೂ ತಿಳಿಸಿದೆ.

ಫಲಿತಾಂಶ ಕುರಿತ ಗೊಂದಲ, ಸಂಶಯಗಳನ್ನು ಬಗೆಹರಿಸಬೇಕು ಎಂದ ಸುಪ್ರೀಂ ಕೋರ್ಟ್‌ನ ಸಲಹೆಗೆ ಸಿಬಿಎಸ್ಇ ಮಂಡಳಿಯು, ಫಲಿತಾಂಶ ಕ್ರೋಡಿಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಮಂಡಳಿಯು ರಚಿಸಿರುವ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗುವುದು ಎಂದು ತಿಳಿಸಿತು.

ADVERTISEMENT

‘ಜುಲೈ 31ರಂದು ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಗಳು ಫಲಿತಾಂಶ, ಅಂಕ ಕುರಿತು ತೃಪ್ತರಾಗದಿದ್ದಲ್ಲಿ ಸಿಬಿಎಸ್ಇಯು ಪರೀಕ್ಷೆಗಾಗಿ ಆನ್‌ಲೈನ್ ಮೂಲಕ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಿದೆ. ಪರಿಸ್ಥಿತಿಯನ್ನು ಆಧರಿಸಿ ಕೇವಲ ಮುಖ್ಯ ವಿಷಯಗಳಿಗೆ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಅಂತಿಮವಾಗಿ ಪರಿಗಣಿಸಲಾಗುವುದು’ ಎಂದು ಸಿಬಿಎಸ್ಇ ತನ್ನ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದೆ.

ಈ ಮಧ್ಯೆ, ನ್ಯಾಯಮೂರ್ತಿ ಎ.ಎಂ. ಖಾನ್‌ವಿಲ್ಕರ್ ನೇತೃತ್ವದ ಪೀಠವು, 12ನೇ ತರಗತಿ ವಿದ್ಯಾರ್ಥಿಗಳಿಗೆ ಫಲಿತಾಂಶ ಘೋಷಣೆಗೆ ಮೊದಲೇ ಸಾಂಪ್ರದಾಯಿಕ ಶೈಲಿಯಲ್ಲಿಯೇ ಪರೀಕ್ಷೆ ನಡಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ತೆಗೆದುಕೊಳ್ಳಲು ನಿರ್ಧರಿಸಿತು.

12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿದ ಬಳಿಕ ಸಿಬಿಎಸ್‌ಇಯು ಲಿಖಿತ ಮತ್ತು ಪ್ರಾಯೋಗಿಕ ವಿಭಾಗಗಲ್ಲಿ ನಿಗದಿತ ಮಾನದಂಡದ ಅನುಸಾರ ಮೌಲ್ಯಮಾಪನ ಮತ್ತು ಫಲಿತಾಂಶ ಅಂತಿಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.