ADVERTISEMENT

ದೆಹಲಿ | ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಸುಗ್ರೀವಾಜ್ಞೆ: ಬಿಜೆಪಿ

ಪಿಟಿಐ
Published 20 ಮೇ 2023, 14:25 IST
Last Updated 20 ಮೇ 2023, 14:25 IST
ಗೌರವ ಭಾಟಿಯಾ
ಗೌರವ ಭಾಟಿಯಾ   

ನವದೆಹಲಿ: ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಬಿಜೆಪಿ ಶನಿವಾರ ಸಮರ್ಥಿಸಿಕೊಂಡಿದೆ.

‘ಈ ಸುಗ್ರೀವಾಜ್ಞೆಯು, ದೆಹಲಿಯ ಸೇವಾ ವಿಷಯಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದೆ. ದೆಹಲಿಯ ಸಾಮಾನ್ಯ ಪ್ರಜೆಯ ಹಿತದೃಷ್ಟಿಯಿಂದಲೂ ಇಂಥ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಬಿಜೆಪಿ ವಕ್ತಾರ ಗೌರವ ಭಾಟಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೆಹಲಿಯು ಕೇಂದ್ರಾಡಳಿತ ಪ್ರದೇಶ. ಇದರ ಆಡಳಿತಕ್ಕೆ ಸಂಬಂಧಿಸಿ ಸಂವಿಧಾನದ 239ಎಎ ವಿಧಿಯಡಿ ಸಂಸತ್‌ಗೆ ಅಧಿಕಾರ ನೀಡಲಾಗಿದೆ. ದೆಹಲಿ ಎಂಬುದು ‘ಅರವಿಂದ ಕೇಜ್ರಿವಾಲ್‌ ಪ್ರದೇಶ’ವಲ್ಲ. ಇಲ್ಲಿ ಸಂವಿಧಾನದ ಪ್ರಕಾರವೇ ಆಡಳಿತ ನಡೆಯುತ್ತದೆ. ನಿಮ್ಮ ಮನಸ್ಸಿಗೆ ತೋಚಿದಂತೆ ಅಲ್ಲ’ ಎಂದು ಕೇಜ್ರಿವಾಲ್‌ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಸುಪ್ರೀಂಕೋರ್ಟ್‌ಗೆ ಬೇಸಿಗೆ ರಜೆ ಆರಂಭವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ’ ಎಂಬ ಆಮ್‌ ಆದ್ಮಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಭಾಟಿಯಾ, ‘ಮೇಲ್ಮನವಿ ಸಲ್ಲಿಸಲು ರಜಾಕಾಲದ ನ್ಯಾಯಪೀಠ ಇದ್ದೇ ಇದೆ’ ಎಂದರು.

‘ಸುಗ್ರೀವಾಜ್ಞೆಯ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ದೆಹಲಿ ಸರ್ಕಾರ ಸೋಮವಾರವೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿ’ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.