ADVERTISEMENT

ಭಾರತದಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ 283ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 13:56 IST
Last Updated 21 ಮಾರ್ಚ್ 2020, 13:56 IST
   

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳ 65 ಜನರಲ್ಲಿ ಶನಿವಾರ ಕೋವಿಡ್‌ 19 ದೃಢಪಟ್ಟಿದ್ದು, ಒಟ್ಟಾರೆ ದೇಶದಲ್ಲಿ ಸೋಂಕಿತರ ಸಂಖ್ಯೆ 283ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕ, ದೆಹಲಿ, ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಮೃತಪಟ್ಟ ಪ್ರಕರಣಗಳು ಸಹ ಇದರಲ್ಲಿ ಸೇರಿವೆ.

ವಿವಿಧ ರಾಜ್ಯಗಳಲ್ಲಿ ಮತ್ತಷ್ಟು ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ ಆರೋಗ್ಯ ಸಚಿವಾಲಯ ಇವುಗಳನ್ನು ಇನ್ನೂ ಅಧಿಕೃತವಾಗಿ ಲೆಕ್ಕಕ್ಕೆ ಸೇರಿಸಿಕೊಂಡಿಲ್ಲ. ಮಾರ್ಚ್‌ 21ರವರೆಗೆ 14,811 ಜನರ ರಕ್ತ, ಗಂಟಲಿನ ದ್ರವದ ಮಾದರಿ ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ.

ADVERTISEMENT

ಸೋಂಕು ವ್ಯಾಪಿಸುತ್ತಿರುವ ಕಾರಣದಿಂದ ದೆಹಲಿಯಲ್ಲಿ ಎಲ್ಲ ಮಾಲ್‌ಗಳನ್ನು ಮುಚ್ಚಲಾಗಿದೆ. ಮುಂಬೈ ಮಹಾನಗರ ಪ್ರದೇಶ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಶನಿವಾರ ಮಧ್ಯರಾತ್ರಿಯಿಂದ ಮಾರ್ಚ್‌ 31ರವರೆಗೆ ಎಲ್ಲ ಕೈಗಾರಿಕೆಗಳು, ಕಚೇರಿಗಳು ಮುಚ್ಚಿರಲಿವೆ. ಶನಿವಾರ ಮಹಾರಾಷ್ಟ್ರದಲ್ಲಿ ಮತ್ತೆ 11 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಪಂಜಾಬ್‌ನಲ್ಲಿ ಮೂರು, ನೋಯ್ಡಾ ಒಂದು ಪ್ರಕರಣ ದೃಢಪಟ್ಟಿದೆ.

ಗುಜರಾತ್‌ನಲ್ಲಿ ಶನಿವಾರ ಮತ್ತೊಂದು ‍ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಲಡಾಖ್‌ನಲ್ಲಿ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ.

‘ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಯ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಸೋಂಕಿತರ ಜತೆ ನೇರ ಸಂಪರ್ಕ ಹೊಂದಿದವರನ್ನು 5 ಹಾಗೂ 14ನೇ ದಿನದ ಅವಧಿಯೊಳಗೆ ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.

ರೋಮ್‌ನಲ್ಲಿರುವವರು ಇಂದು ಭಾರತಕ್ಕೆ: ಸೋಂಕು ಹೆಚ್ಚಾಗಿ ವ್ಯಾಪಿಸಿರುವ ಇಟಲಿಯಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಏರ್‌ ಇಂಡಿಯಾ ವಿಮಾನ ಶನಿವಾರ ಮಧ್ಯಾಹ್ನ ರೋಮ್‌ಗೆ ತೆರಳಿದೆ. ಭಾನುವಾರ ಬೆಳಗ್ಗೆ ವಿಮಾನ ದೆಹಲಿಗೆ ವಾಪಾಸಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಮಾರ್ಚ್‌ 22ರಿಂದ ಮುಂದಿನ ಒಂದು ವಾರ, ವಿದೇಶಗಳಿಂದ ಆಗಮಿಸುವ ವಿಮಾನಗಳಿಗೆ ಭಾರತ ನಿರ್ಬಂಧ ಹೇರಿದೆ. ಹೀಗಾಗಿ ಇಟಲಿ, ಇರಾನ್‌ ಮುಂತಾದ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರವೇ ಕ್ರಮ ಕೈಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.