ನವದೆಹಲಿ: ‘ಪಾಕಿಸ್ತಾನ ಜೊತೆಗಿನ ಮಾತುಕತೆ ‘ಸ್ಪಷ್ಟವಾಗಿ ದ್ವಿಪಕ್ಷೀಯ’ ಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಲ್ಲಿ ಹೇಳಿದರು.
ಗುರುವಾರ ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪ್ರಧಾನಿ ಅವರೂ ಪಾಕ್ ಜೊತೆಗೆ ಭಯೋತ್ಪಾದನೆ ನಿರ್ಮೂಲನೆ ಕುರಿತು ಮಾತ್ರ ಚರ್ಚಿಸುತ್ತೇವೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
‘ಪಾಕಿಸ್ತಾನವು ಉಗ್ರರ ಪಟ್ಟಿಯನ್ನೇ ಹೊಂದಿದೆ. ಅವರನ್ನು ಅಲ್ಲಿನ ಸರ್ಕಾರ ಒಪ್ಪಿಸಬೇಕಾಗಿದೆ. ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ಮುಚ್ಚಿಸಬೇಕಾಗಿದೆ. ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಹೇಳಿದರು.
ಭಯೋತ್ಪಾದನೆ ನಿರ್ಮೂಲನೆಗೆ ಪಾಕಿಸ್ತಾನ ಸರ್ಕಾರ ಏನು ಮಾಡಬೇಕು ಎಂಬ ವಿಷಯವನ್ನು ಕುರಿತು ಚರ್ಚಿಸಲು ಭಾರತ ಸರ್ಕಾರ ಸಿದ್ಧವಿದೆ ಎಂದು ಜೈಶಂಕರ್ ಹೇಳಿದರು.
ಕಾಶ್ಮೀರ ಕುರಿತಂತೆ ಚರ್ಚಿಸಲು ಉಳಿದಿರುವ ಒಂದೇ ಅಂಶವೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ತೆರವು. ಈ ಬಗ್ಗೆ ಚರ್ಚಿಸಲೂ ಸರ್ಕಾರ ಸಿದ್ಧವಿದೆ. ಸರ್ಕಾರದ ನಿಲುವು ಈ ವಿಷಯದಲ್ಲೂ ಸ್ಪಷ್ಟವಾಗಿದೆ ಎಂದು ಹೇಳಿದರು.
‘ಪಹಲ್ಗಾಮ್ ದಾಳಿಗೆ ಉತ್ತರ ನೀಡಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯೂ ಒತ್ತಿ ಹೇಳಿತ್ತು. ಆಪರೇಷನ್ ಸಿಂಧೂರ ಮೂಲಕ ಮೇ 7ರಂದು ಬೆಳಿಗ್ಗೆ ಇದನ್ನು ಕಾರ್ಯಗತಗೊಳಿಸಿದ್ದೇವೆ’ ಎಂದು ಹೇಳಿದರು.
ಭಾರತ ಅಂದು ಉಗ್ರರ ನೆಲೆಯನ್ನು ಗುರಿಯಾಗಿಸಿ ನಿರ್ದಿಷ್ಟ ದಾಳಿ ನಡೆಸಿತ್ತು.ಪ್ರತಿಯಾಗಿ ಪಾಕಿಸ್ತಾನ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.