ನವದೆಹಲಿ: ಮತದಾರರ ಪಟ್ಟಿಯಲ್ಲಿ ದೋಷಗಳ ಬಗ್ಗೆ ದೂರು ಸೇರಿದಂತೆ ಚುನಾವಣಾ ಪ್ರಕ್ರಿಯೆ ಕುರಿತು ವ್ಯಾಪಕ ಆರೋಪಗಳು ಕೇಳಿಬರುತ್ತಿರುವ ಕಾರಣ, ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ಚುನಾವಣಾ ಆಯೋಗ ಮಂಗಳವಾರ ಹೇಳಿದೆ.
ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಆಯೋಗವು, ‘ಸ್ಥಾಪಿತ ಕಾನೂನುಗಳ ಪ್ರಕಾರ, ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಬೇಕಿದೆ. ಎರಡೂ ಕಡೆಯವರಿಗೆ ಒಪ್ಪಿತವಾಗುವ ದಿನಾಂಕದಂದು ಈ ಸಭೆ ನಡೆಸುವುದಾಗಿ’ ತಿಳಿಸಿದೆ.
ಪಕ್ಷಗಳ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರೊಂದಿಗೆ ಚರ್ಚಿಸುವುದಾಗಿಯೂ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ, ಮತದಾರರ ನೋಂದಣಿ ಅಧಿಕಾರಿಗಳು(ಇಆರ್‌ಒ), ಜಿಲ್ಲಾ ಚುನಾವಣಾ ಅಧಿಕಾರಿಗಳು(ಡಿಇಒ) ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಮಟ್ಟದಲ್ಲಿ ‘ಬಗೆಹರಿಯದ ಯಾವುದೇ ಸಮಸ್ಯೆ’ ಕುರಿತು ಏಪ್ರಿಲ್ 30ರ ಒಳಗಾಗಿ ಸಲಹೆಗಳನ್ನು ನೀಡುವಂತೆ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಆಯೋಗ ಕೋರಿದೆ.
‘ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಬೇಕು, ಅಲ್ಲಿ ವ್ಯಕ್ತವಾಗು ಸಲಹೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಈ ಕುರಿತು ಮಾರ್ಚ್ 31ರ ಒಳಗಾಗಿ ವರದಿ ಸಲ್ಲಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರು ಕಳೆದ ವಾರ ನಡೆದಿದ್ದ ಆಯೋಗದ ಸಮಾವೇಶದಲ್ಲಿ ಎಲ್ಲ ಸಿಇಒ, ಡಿಇಒ ಹಾಗೂ ಇಆರ್‌ಒಗಳಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.